
ವಿಜಯಪುರ, 08 ಜೂನ್ (ಹಿ.ಸ.) :
ಆಂಕರ್ : ಎಐಸಿಸಿ ಕಾರ್ಯದರ್ಶಿ, ಕೆಪಿಸಿಸಿ ಉಪಾಧ್ಯಕ್ಷರು ಹಾಗೂ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಉಪಾಧ್ಯಕ್ಷರಾಗಿದ್ದ ಸೂರಜ್ ಹೆಗಡೆ ಅವರ ಹಠಾತ್ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸೂರಜ್ ಹೆಗಡೆ ಅವರು ತಮ್ಮ ಸಂಘಟನಾ ಚಾತುರ್ಯ, ಜನಪರ ಕಾಳಜಿ ಹಾಗೂ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳ ಮೇಲಿನ ಅಚಲ ನಿಷ್ಠೆಯ ಮೂಲಕ ಪಕ್ಷದ ಬಲವರ್ಧನೆಗೆ ಅಮೂಲ್ಯ ಕೊಡುಗೆ ನೀಡಿದ್ದರು ಎಂದು ಸ್ಮರಿಸಿದ್ದಾರೆ.
ಪಕ್ಷದ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದ ಅವರು, ವಿಶೇಷವಾಗಿ ತಮಿಳುನಾಡು ಹಾಗೂ ಪುದುಚೆರಿ ರಾಜ್ಯಗಳ ಉಸ್ತುವಾರಿಯಾಗಿ ಮಹತ್ವದ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು. ಯುವ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ವಿಶಿಷ್ಟ ಛಾಪು ಮೂಡಿಸಿದ್ದ ಸೂರಜ್ ಹೆಗಡೆ ಅವರು ಕಾರ್ಯಕರ್ತರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು ಎಂದು ಸಚಿವರು ಹೇಳಿದ್ದಾರೆ.
ಅವರ ಅಕಾಲಿಕ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ ಸಾರ್ವಜನಿಕ ಜೀವನಕ್ಕೂ ದೊಡ್ಡ ನಷ್ಟವಾಗಿದೆ. ಪಕ್ಷದ ಬೆಳವಣಿಗೆಗೆ ಹಾಗೂ ಜನಸೇವೆಗೆ ಅವರು ಸಲ್ಲಿಸಿದ ಕೊಡುಗೆ ಸದಾ ಸ್ಮರಣೀಯವಾಗಿರಲಿದೆ ಎಂದು ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ದಿವಂಗತ ಸೂರಜ್ ಹೆಗಡೆ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಹಾಗೂ ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಕುಟುಂಬದ ಸದಸ್ಯರು, ಬಂಧುಗಳು ಹಾಗೂ ಅಪಾರ ಅಭಿಮಾನಿಗಳಿಗೆ ಭಗವಂತನು ಕರುಣಿಸಲಿ ಎಂದು ಸಚಿವರು ತಮ್ಮ ಸಂತಾಪ ಸಂದೇಶದಲ್ಲಿ ಪ್ರಾರ್ಥಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande