ಕುಡಿಯುವ ನೀರಿಗಾಗಿ ತೆರಳಿದ್ದ ವ್ಯಕ್ತಿ ಹೊಂಡದಲ್ಲಿ ಬಿದ್ದು ಸಾವು
ರಿ
ಫೋಟೋ


ಗದಗ, 08 ಜೂನ್ (ಹಿ.ಸ.) :

ಆ್ಯಂಕರ್ : ಮಳೆಗಾಲ ಆರಂಭವಾಗಿದ್ದರೂ ಗದಗ ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನೂ ಬಿಗಡಾಯಿಸಿರುವುದು ಮತ್ತೊಮ್ಮೆ ಬೆಳಕಿಗೆ ಬಂದಿದೆ.

ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ಕುಡಿಯುವ ನೀರು ತರಲು ತೆರಳಿದ್ದ ವ್ಯಕ್ತಿಯೊಬ್ಬರು ಅಕ್ರಮ ಮಣ್ಣು ಗಣಿಗಾರಿಕೆಯಿಂದ ನಿರ್ಮಾಣವಾಗಿದ್ದ ಆಳವಾದ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ದುರಂತ ಘಟನೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಅವಘಡದಲ್ಲಿ ಮೃತಪಟ್ಟ ಕುಟುಂಬಕ್ಕೆ ಇದುವರೆಗೆ ಯಾವುದೇ ಪರಿಹಾರ ಘೋಷಿಸದಿರುವ ಜಿಲ್ಲಾಡಳಿತ ಹಾಗೂ ಸಂಬಂಧಿತ ಇಲಾಖೆಗಳ ವಿರುದ್ಧ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಟುಮಚಗಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಹಲವು ವರ್ಷಗಳಿಂದ ಮುಂದುವರಿದಿದೆ. ಗ್ರಾಮದಲ್ಲಿ ಸಮರ್ಪಕ ನೀರಿನ ಪೂರೈಕೆ ಇಲ್ಲದ ಕಾರಣ ಗ್ರಾಮಸ್ಥರು ದೂರದ ಪ್ರದೇಶಗಳಿಂದ ನೀರು ತಂದು ಜೀವನ ಸಾಗಿಸುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಈ ಸಮಸ್ಯೆ ಪರಿಹರಿಸುವಂತೆ ಗ್ರಾಮಸ್ಥರು ಈ ಹಿಂದೆಯೂ ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದೇ ಇರುವುದರಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಇಂತಹ ಪರಿಸ್ಥಿತಿಯಲ್ಲೇ ಮೇ 3ರಂದು ಗ್ರಾಮದ 55 ವರ್ಷದ ಚೆನ್ನಯ್ಯ ಬಳಗೇರಮಠ ಅವರು ಗ್ರಾಮದ ಹೊರವಲಯದಲ್ಲಿರುವ ಹೊಂಡಕ್ಕೆ ನೀರು ತರಲು ತೆರಳಿದ್ದರು. ಅಲ್ಲಿ ನೀರು ತುಂಬುವ ಸಂದರ್ಭದಲ್ಲಿ ಆಯತಪ್ಪಿ ಆಳವಾದ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ಈ ದುರ್ಘಟನೆಯಿಂದ ಕುಟುಂಬದ ಏಕೈಕ ಆಧಾರಸ್ತಂಭವಾಗಿದ್ದ ಚೆನ್ನಯ್ಯರನ್ನು ಕಳೆದುಕೊಂಡ ಕುಟುಂಬ ಇದೀಗ ಕಂಗಾಲಾಗಿದೆ. ಪತ್ನಿ ಹಾಗೂ ಇಬ್ಬರು ಮಕ್ಕಳು ಜೀವನೋಪಾಯದ ಚಿಂತೆಯಲ್ಲಿ ದಿನ ಕಳೆಯುವಂತಾಗಿದೆ.

ಮೃತರ ಸಂಬಂಧಿಕ ಶರಣಯ್ಯ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆಯಿಂದಲೇ ಚೆನ್ನಯ್ಯ ನೀರು ತರಲು ಹೋಗಿದ್ದರು. ಅಕ್ರಮ ಗಣಿಗಾರಿಕೆಯಿಂದ ನಿರ್ಮಾಣವಾದ ಹೊಂಡವೇ ಅವರ ಸಾವಿಗೆ ಕಾರಣವಾಗಿದೆ. ಆದರೆ ಇಷ್ಟು ದೊಡ್ಡ ದುರಂತ ನಡೆದರೂ ಯಾವುದೇ ಅಧಿಕಾರಿ ಅಥವಾ ಜನಪ್ರತಿನಿಧಿ ಕುಟುಂಬದ ನೆರವಿಗೆ ಬಂದಿಲ್ಲ. ಸರ್ಕಾರ ಕೂಡ ಪರಿಹಾರ ನೀಡಿಲ್ಲ ಎಂದು ಆರೋಪಿಸಿದರು.

ಗ್ರಾಮಸ್ಥರ ಪ್ರಕಾರ, ಗದಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ವಿಂಡ್ ಎನರ್ಜಿ ಕಂಪನಿಗಳ ಚಟುವಟಿಕೆಗಳು ಹೆಚ್ಚಾಗಿವೆ. ಗಾಳಿ ವಿದ್ಯುತ್ ಯೋಜನೆಗಳಿಗೆ ಅಗತ್ಯವಾದ ಕಾಮಗಾರಿಗಳಿಗಾಗಿ ಅನೇಕ ಕಡೆ ಅಕ್ರಮವಾಗಿ ಮಣ್ಣು ತೆಗೆಯಲಾಗುತ್ತಿದೆ. ಕೋಟುಮಚಗಿ ಗ್ರಾಮದ ಸುತ್ತಮುತ್ತಲೂ ಭಾರಿ ಪ್ರಮಾಣದಲ್ಲಿ ಮಣ್ಣು ಲೂಟಿ ಮಾಡಲಾಗಿದ್ದು, 60 ರಿಂದ 70 ಅಡಿ ಆಳದ ಹೊಂಡಗಳನ್ನು ನಿರ್ಮಿಸಿ ಹಾಗೆಯೇ ಬಿಟ್ಟು ಹೋಗಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ನಿಯಮಾನುಸಾರ ಗಣಿಗಾರಿಕೆ ಮುಗಿದ ಬಳಿಕ ಹೊಂಡಗಳನ್ನು ಮುಚ್ಚಬೇಕು ಅಥವಾ ಅಪಾಯ ತಪ್ಪಿಸಲು ಸುತ್ತಲೂ ಸುರಕ್ಷತಾ ಬೇಲಿ ಅಳವಡಿಸಬೇಕು. ಆದರೆ ಈ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಲಾಗುತ್ತಿದೆ. ಪರಿಣಾಮವಾಗಿ ಮಳೆ ನೀರು ಹಾಗೂ ಭೂಗರ್ಭ ಜಲದಿಂದ ಹೊಂಡಗಳು ತುಂಬಿ, ಗ್ರಾಮಸ್ಥರು ಅದನ್ನೇ ಕುಡಿಯುವ ನೀರಿಗಾಗಿ ಬಳಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವರು ಈಜಲು ತೆರಳಿದಾಗಲೂ ಅವಘಡಗಳು ಸಂಭವಿಸುತ್ತಿವೆ.

ಗ್ರಾಮಸ್ಥ ಮಹಾದೇವ ಅವರು ಮಾತನಾಡಿ, ಅಕ್ರಮ ಗಣಿಗಾರಿಕೆಯಿಂದ ನಿರ್ಮಾಣವಾದ ಹೊಂಡಗಳು ಜನರ ಜೀವಕ್ಕೆ ಅಪಾಯಕಾರಿಯಾಗಿವೆ. ಜಿಲ್ಲೆಯಲ್ಲಿ ಈಗಾಗಲೇ ಹಲವು ಮಕ್ಕಳು ಹಾಗೂ ಯುವಕರು ಇಂತಹ ಹೊಂಡಗಳಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಆದರೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಾವುದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಹಾಗೂ ಅಪಾಯಕಾರಿ ಹೊಂಡಗಳ ಸುತ್ತ ಸುರಕ್ಷತಾ ಬೇಲಿ ಅಳವಡಿಸಬೇಕು ಎಂದು ಆಗ್ರಹಿಸಿದರು.

ಗ್ರಾಮಸ್ಥರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ರಮ ಮಣ್ಣು ಗಣಿಗಾರಿಕೆಗೆ ಕಡಿವಾಣ ಹಾಕುವಲ್ಲಿ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ. ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಬಗ್ಗೆ ಹಲವಾರು ಬಾರಿ ದೂರು ನೀಡಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಚೆನ್ನಯ್ಯ ಬಳಗೇರಮಠ ಅವರ ಸಾವಿನಿಂದ ಕುಟುಂಬ ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ತಕ್ಷಣ ಸೂಕ್ತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಇರುವ ಎಲ್ಲಾ ಅಕ್ರಮ ಕ್ವಾರಿಗಳ ಪರಿಶೀಲನೆ ನಡೆಸಿ, ಅಪಾಯಕಾರಿ ಹೊಂಡಗಳನ್ನು ಮುಚ್ಚುವ ಕಾರ್ಯ ಕೈಗೊಳ್ಳಬೇಕು ಹಾಗೂ ಅಕ್ರಮವಾಗಿ ಮಣ್ಣು ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಒಟ್ಟಾರೆ, ಕುಡಿಯುವ ನೀರಿನ ಸಮಸ್ಯೆ, ಅಕ್ರಮ ಮಣ್ಣು ಗಣಿಗಾರಿಕೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಸೇರಿ ಒಂದು ಅಮಾಯಕ ಜೀವವನ್ನು ಬಲಿ ಪಡೆದಿರುವ ಈ ಘಟನೆ ಗದಗ ಜಿಲ್ಲೆಯಲ್ಲಿ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವ ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande