ಬಳ್ಳಾರಿ ಜಿಲ್ಲೆ : ಬೃಹತ್ ಲೋಕ್ ಅದಾಲತ್ ‘ಸಮಾಧಾನ ಸಮಾರೋಹ'
ಬಳ್ಳಾರಿ, 08 ಜೂನ್ (ಹಿ.ಸ.) : ಆ್ಯಂಕರ್ : ಕಾನೂನು ಜಾಗೃತಿ ಮೂಡಿಸಲು ಹಾಗೂ ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಉಭಯ ಪಕ್ಷಕಾರರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಬಳ್ಳಾರಿ ಜಿಲ್ಲೆಯಾದ್ಯಂತ ಬೃಹತ್ ಲೋಕ ಅದಾಲತ್ಗಳ ಸರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿ
ಬಳ್ಳಾರಿ ಜಿಲ್ಲೆ : ಬೃಹತ್ ಲೋಕ್ ಅದಾಲತ್ ‘ಸಮಾಧಾನ ಸಮಾರೋಹ'


ಬಳ್ಳಾರಿ, 08 ಜೂನ್ (ಹಿ.ಸ.) :

ಆ್ಯಂಕರ್ : ಕಾನೂನು ಜಾಗೃತಿ ಮೂಡಿಸಲು ಹಾಗೂ ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಉಭಯ ಪಕ್ಷಕಾರರ ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಬಳ್ಳಾರಿ ಜಿಲ್ಲೆಯಾದ್ಯಂತ ಬೃಹತ್ ಲೋಕ ಅದಾಲತ್ಗಳ ಸರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು ಅವರು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್, ಹೈಕೋರ್ಟ್ ಹಾಗೂ ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದನ್ವಯ ರಾಷ್ಟ್ರೀಯ ಲೋಕ್-ಅದಾಲತ್, ಚೆಕ್ ಬೌನ್ಸ್ ಪ್ರಕರಣಗಳ ವಿಶೇಷ ಲೋಕ್ ಅದಾಲತ್ ಹಾಗೂ ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ‘ಸಮಾಧಾನ ಸಮಾರೋಹ' ಆಂದೋಲನಗಳನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್: ಬರುವ ಜುಲೈ 11 ರಂದು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವರ್ಷದ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ಅನ್ನು ಆಯೋಜಿಸಲಾಗಿದೆ. ಇಲ್ಲಿ ಸಿವಿಲ್, ರಾಜಿಯಾಗಬಹುದಾದ ಕ್ರಿಮಿನಲ್, ಮೋಟಾರು ವಾಹನ ಅಪಘಾತ ಪರಿಹಾರ ಹಾಗೂ ಕೌಟುಂಬಿಕ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗುತ್ತದೆ.

ಎನ್.ಐ. ಆಕ್ಟ್ (ಚೆಕ್ ಬೌನ್ಸ್) ವಿಶೇಷ ಲೋಕ ಅದಾಲತ್: ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಕಾಯ್ದೆ (ಸೆಕ್ಷನ್ 138 - ಚೆಕ್ ಬೌನ್ಸ್) ಪ್ರಕರಣಗಳ ಶೀಘ್ರ ವಿಲೇವಾರಿಗಾಗಿ ವಿಶೇಷ ಕರಡು ಸಿದ್ಧಪಡಿಸಲಾಗಿದ್ದು, 18-07-2026 ಮತ್ತು 21-11-2026 ರಂದು (ಜುಲೈ ಮತ್ತು ನವೆಂಬರ್ ತಿಂಗಳ 3 ನೇ ಶನಿವಾರ) ವಿಶೇಷ ಲೋಕ ಅದಾಲತ್ಗಳನ್ನು ನಡೆಸಲಾಗುತ್ತದೆ.

ಸಮಾಧಾನ ಸಮಾರೋಹ - 2026 (ಸುಪ್ರೀಂ ಕೋರ್ಟ್ ವಿಶೇಷ ಲೋಕ್-ಅದಾಲತ್): ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ, ಜಿಲ್ಲೆಗೆ ಸಂಬಂಧಿಸಿದ ಹಾಗೂ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳನ್ನು ಮಧ್ಯಸ್ಥಿಕೆ ಮುಖಾಂತರ ಬಗೆಹರಿಸಿಕೊಳ್ಳಲು ಆಗಸ್ಟ್ 21, 22 ಮತ್ತು 23 ರಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲೂಕು ಕಾನೂನು ಸೇವಾ ಸಮಿತಿಗಳಲ್ಲಿ ವಿಶೇಷ ಲೋಕ್-ಅದಾಲತ್ ವ್ಯವಸ್ಥೆ ಮಾಡಲಾಗಿದೆ. ಈ ಪ್ರಕರಣಗಳಿಗೆ ‘ಸಮಾಧಾನ ಸಮಾರೋಹ' ಅಡಿಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು.

ಚೆಕ್ ಅಮಾನ್ಯ ಪ್ರಕರಣಗಳು : ಎನ್.ಐ. ಆಕ್ಟ್ ಸೆಕ್ಷನ್ 138ರ ಅಡಿಯಲ್ಲಿನ ಚೆಕ್ ಬೌನ್ಸ್ ಪ್ರಕರಣಗಳು.

ಬ್ಯಾಂಕ್ ಮತ್ತು ಹಣ ವಸೂಲಾತಿ : ಬ್ಯಾಂಕ್ ಸಾಲ ಮರುಪಾವತಿ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ವಿವಾದಗಳು.

ಸಿವಿಲ್ ವಿವಾದಗಳು : ಆಸ್ತಿ ವಿಭಜನೆ, ಒಪ್ಪಂದದ ಉಲ್ಲಂಘನೆ, ಬಾಡಿಗೆ ವಿವಾದಗಳು ಮತ್ತು ಇತರ ಸಿವಿಲ್ ಕೇಸ್ಗಳು.

ಮೋಟಾರು ವಾಹನ ಅಪಘಾತ : ಅಪಘಾತ ಪರಿಹಾರ ಕೋರಿ ವಿಮಾ ಕಂಪನಿಗಳ ವಿರುದ್ಧ ಸಲ್ಲಿಸಲಾದ ಪ್ರಕರಣಗಳು.

ಕೌಟುಂಬಿಕ ಕಲಹಗಳು : ವಿಚ್ಛೇದನವನ್ನು ಹೊರತುಪಡಿಸಿ, ಜೀವನಾಂಶ ಹಾಗೂ ದಂಪತಿಗಳ ಪುನರ್ ಮಿಲನಕ್ಕೆ ಸಂಬಂಧಿಸಿದ ಪ್ರಕರಣಗಳು.

ಸಾರ್ವಜನಿಕ ಸೌಲಭ್ಯಗಳು : ವಿದ್ಯುತ್, ನೀರು ಸರಬರಾಜು ಬಿಲ್ ಹಾಗೂ ದೂರಸಂಪರ್ಕ ಇಲಾಖೆಗೆ ಸಂಬಂಧಿಸಿದ ವಿವಾದಗಳು.

ಲೋಕ್ ಅದಾಲತ್ನಲ್ಲಿ ಪಾಲ್ಗೊಳ್ಳುವ ಕಕ್ಷಿದಾರರಿಗೆ ಕಾನೂನು ಪ್ರಾಧಿಕಾರವು ಹಲವು ಪ್ರಮುಖ ಸೌಲಭ್ಯಗಳನ್ನು ಕಲ್ಪಿಸಿದೆ.

ನ್ಯಾಯಾಲಯದ ಶುಲ್ಕ ಮರುಪಾವತಿ : ಲೋಕ ಅದಾಲತ್ನಲ್ಲಿ ಪ್ರಕರಣಗಳು ಸೌಹಾರ್ದಯುತವಾಗಿ ಇತ್ಯರ್ಥವಾದರೆ, ಸಾರ್ವಜನಿಕರು ನ್ಯಾಯಾಲಯಕ್ಕೆ ಈಗಾಗಲೇ ಪಾವತಿಸಿರುವ ಸಂಪೂರ್ಣ ನ್ಯಾಯಾಲಯದ ಶುಲ್ಕವನ್ನು ಮರಳಿ ನೀಡಲಾಗುವುದು.

ಹೈಬ್ರಿಡ್ ವ್ಯವಸ್ಥೆ : ಕಕ್ಷಿದಾರರು ನ್ಯಾಯಾಲಯಕ್ಕೆ ಖುದ್ದಾಗಿ ಹಾಜರಾಗಲು ಸಾಧ್ಯವಾಗದಿದ್ದಲ್ಲಿ, ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭಾಗವಹಿಸಿ ರಾಜಿ ಸಂಧಾನ ಮಾಡಿಕೊಳ್ಳಲು ಮುಕ್ತ ಅವಕಾಶ ನೀಡಲಾಗಿದೆ.

ಮೇಲ್ಮನವಿಗೆ ಅವಕಾಶವಿಲ್ಲ : ಲೋಕ ಅದಾಲತ್ನಲ್ಲಿ ನೀಡಲಾಗುವ ತೀರ್ಪು ಅಂತಿಮವಾಗಿದ್ದು, ಇದರ ವಿರುದ್ಧ ಯಾವುದೇ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದಿಲ್ಲ. ಇದರಿಂದಾಗಿ ಕಕ್ಷಿದಾರರ ಸುದೀರ್ಘ ಸಮಯ ಮತ್ತು ಹಣ ಎರಡೂ ಉಳಿತಾಯವಾಗುತ್ತದೆ.

ಹಣ ಹಾಗೂ ಸಮಯದ ಉಳಿತಾಯವಾಗುವುದನ್ನು ಗಮನದಲ್ಲಿಟ್ಟುಕೊಂಡು ಉಭಯ ಪಕ್ಷಗಾರರು ಪರಸ್ಪರ ಮಾತುಕತೆಯ ಮೂಲಕ ಸೌಹಾರ್ದಯುತವಾಗಿ ವಿವಾದಗಳನ್ನು ಬಗೆಹರಿಸಿಕೊಳ್ಳಲು ಇದೊಂದು ಸುವರ್ಣಾವಕಾಶವಾಗಿದೆ.

ಸಾರ್ವಜನಿಕರು, ಉದ್ಯಮಿಗಳು, ಬ್ಯಾಂಕ್ ಅಧಿಕಾರಿಗಳು ಮತ್ತು ವಕೀಲ ಮಿತ್ರರು ಈ ವಿಶೇಷ ಅದಾಲತ್ ಹಾಗೂ ‘ಸಮಾಧಾನ ಸಮಾರೋಹ'ದ ಸದುಪಯೋಗ ಪಡೆದುಕೊಳ್ಳಬೇಕು.

ಹೆಚ್ಚಿನ ವಿವರಗಳಿಗಾಗಿ ಮತ್ತು ತಮ್ಮ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್ಗೆ ಸೇರಿಸಲು ಕಕ್ಷಿದಾರರು ತಕ್ಷಣವೇ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಆಯಾ ತಾಲ್ಲೂಕು ಕಾನೂನು ಸೇವಾ ಸಮಿತಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿದ್ಧಲಿಂಗ ಪ್ರಭು ಅವರು ಕೋರಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande