ಬುದ್ಧಿಮಾಂದ್ಯ ಮಕ್ಕಳಿಗೆ ಉದ್ಯೋಗಾಧಾರಿತ ಕಂಪ್ಯೂಟರ್ ತರಬೇತಿ ; ಸ್ವಾವಲಂಬಿ ಬದುಕಿಗೆ ಸುವರ್ಣಾವಕಾಶ
ಗದಗ, 08 ಜೂನ್ (ಹಿ.ಸ.) : ಆ್ಯಂಕರ್ : ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ವಿಶ್ವ ಕಲ್ಯಾಣ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಅಂಬಾ ಕಂಪನಿಯ ಸಹಯೋಗದಲ್ಲಿ “ಲರ್ನ್ & ಅರ್ನ್” (ಕಲಿ
ಫೋಟೋ


ಗದಗ, 08 ಜೂನ್ (ಹಿ.ಸ.) :

ಆ್ಯಂಕರ್ : ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ವಿಶ್ವ ಕಲ್ಯಾಣ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಅಂಬಾ ಕಂಪನಿಯ ಸಹಯೋಗದಲ್ಲಿ “ಲರ್ನ್ & ಅರ್ನ್” (ಕಲಿಯಿರಿ ಮತ್ತು ಸಂಪಾದಿಸಿರಿ) ಯೋಜನೆಯಡಿ ಬುದ್ಧಿಮಾಂದ್ಯ ಮಕ್ಕಳಿಗೆ ಉದ್ಯೋಗಾಧಾರಿತ ಕಂಪ್ಯೂಟರ್ ತರಬೇತಿ ನೀಡುವ ವಿಶೇಷ ಕಾರ್ಯಕ್ರಮವನ್ನು ಗದಗ ನಗರದ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ಆರಂಭಿಸಲಾಗಿದೆ.

ಈ ಯೋಜನೆಯ ಪ್ರಮುಖ ಉದ್ದೇಶ ವಿಶೇಷ ಮಕ್ಕಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಾಗಿದೆ.

ತರಬೇತಿ ಪೂರ್ಣಗೊಳಿಸಿ ಯಶಸ್ವಿಯಾದ ಮಕ್ಕಳಿಗೆ ವಿವಿಧ ಕಂಪ್ಯೂಟರ್ ಆಧಾರಿತ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಅವಕಾಶ ಒದಗಿಸಲಾಗುತ್ತಿದ್ದು, ಅವರು ನಿರ್ವಹಿಸುವ ಕೆಲಸದ ಆಧಾರದ ಮೇಲೆ ಪ್ರತಿ ತಿಂಗಳು ಗೌರವಧನ ನೀಡಲಾಗುತ್ತದೆ. ಈ ಮೂಲಕ ವಿಶೇಷ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಜೊತೆಗೆ ಆರ್ಥಿಕ ಸ್ವಾವಲಂಬನೆಯತ್ತ ಅವರನ್ನು ಕೊಂಡೊಯ್ಯುವ ಪ್ರಯತ್ನ ಇದಾಗಿದೆ.

ಸಂಸ್ಥೆಯ ಅಧಿಕಾರಿಗಳ ಪ್ರಕಾರ, ಈಗಾಗಲೇ ಈ ತರಬೇತಿ ಪಡೆದು ಉದ್ಯೋಗದಲ್ಲಿ ತೊಡಗಿರುವ ಹಲವಾರು ವಿಶೇಷ ಮಕ್ಕಳು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಅವರ ಯಶೋಗಾಥೆಗಳು ಇತರ ಮಕ್ಕಳಿಗೂ ಪ್ರೇರಣೆಯಾಗಿದ್ದು, ಪಾಲಕರಲ್ಲಿಯೂ ಹೊಸ ಆಶಾಭಾವನೆ ಮೂಡಿಸಿವೆ.

ಸಾಮಾನ್ಯವಾಗಿ ಬುದ್ಧಿಮಾಂದ್ಯ ಮಕ್ಕಳಿಗೆ ಶಿಕ್ಷಣದ ನಂತರ ಉದ್ಯೋಗದ ಅವಕಾಶಗಳು ಸೀಮಿತವಾಗಿರುತ್ತವೆ. ಆದರೆ “ಲರ್ನ್ & ಅರ್ನ್” ಯೋಜನೆ ಅವರ ಕೌಶಲ್ಯವನ್ನು ಗುರುತಿಸಿ, ಉದ್ಯೋಗದೊಂದಿಗೆ ಗೌರವಯುತ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದೆ.

ಈ ತರಬೇತಿ ಕಾರ್ಯಕ್ರಮದಲ್ಲಿ ಕೇವಲ 20 ವಿಶೇಷ ಮಕ್ಕಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮೊದಲು ನೋಂದಾಯಿಸಿಕೊಳ್ಳುವವರಿಗೆ ಆದ್ಯತೆ ನೀಡಲಾಗುವುದು. ತರಬೇತಿಯಲ್ಲಿ ಮಕ್ಕಳ ಸಾಮರ್ಥ್ಯಕ್ಕೆ ತಕ್ಕಂತೆ ಕಂಪ್ಯೂಟರ್ ಬಳಕೆ, ಡೇಟಾ ನಿರ್ವಹಣೆ ಸೇರಿದಂತೆ ವಿವಿಧ ಉದ್ಯೋಗಾಧಾರಿತ ಕೌಶಲ್ಯಗಳನ್ನು ಕಲಿಸಲಾಗುತ್ತದೆ. ತರಬೇತಿಯ ನಂತರ ಸೂಕ್ತ ಕಾರ್ಯಗಳಲ್ಲಿ ತೊಡಗಿಸಿ, ಅವರಿಗೆ ಮಾಸಿಕ ಗೌರವಧನ ದೊರೆಯುವ ವ್ಯವಸ್ಥೆ ಮಾಡಲಾಗಿದೆ.

ಆಸಕ್ತ ಬುದ್ಧಿಮಾಂದ್ಯ ಮಕ್ಕಳ ಪಾಲಕರು ತಮ್ಮ ಮಕ್ಕಳನ್ನು ತಕ್ಷಣವೇ ನೋಂದಾಯಿಸಿಕೊಳ್ಳುವಂತೆ ಸಂಸ್ಥೆ ಮನವಿ ಮಾಡಿದೆ. ನೋಂದಣಿಗಾಗಿ ಫಲಾನುಭವಿಯ ಆಧಾರ್ ಕಾರ್ಡ್, ಎರಡು ಭಾವಚಿತ್ರಗಳು, ಯುಡಿಐಡಿ ಕಾರ್ಡ್ ಅಥವಾ ವೈದ್ಯಕೀಯ ಪ್ರಮಾಣಪತ್ರ ಹಾಗೂ ರೇಷನ್ ಕಾರ್ಡ್ ದಾಖಲಾತಿಗಳನ್ನು ಸಲ್ಲಿಸಬೇಕಾಗಿದೆ.

ನೋಂದಣಿ ಪ್ರಕ್ರಿಯೆ ಗದಗ ನಗರದ ಸಿದ್ಧಲಿಂಗ ನಗರದಲ್ಲಿರುವ ಮಹಾಗಣಪತಿ ದೇವಸ್ಥಾನದ ಸಮೀಪದ ವಿಶ್ವ ಕಲ್ಯಾಣ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಯಲ್ಲಿ ನಡೆಯಲಿದೆ. ವಿಶೇಷ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವ ಈ ಯೋಜನೆಯ ಸದುಪಯೋಗವನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುವಂತೆ ಸಂಸ್ಥೆಯ ಪದಾಧಿಕಾರಿಗಳು ಹಾಗೂ ತರಬೇತಿ ಸಂಯೋಜಕರು ಕರೆ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ 9036925145, 9341837110 ಹಾಗೂ 7892348973 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದಾಗಿದೆ.

ವಿಶೇಷ ಮಕ್ಕಳ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸುವ ಈ ಯೋಜನೆ ಸಮಾಜದಲ್ಲಿ ಸಮಾನ ಅವಕಾಶಗಳ ಪರಿಕಲ್ಪನೆಗೆ ಮತ್ತಷ್ಟು ಬಲ ತುಂಬುವ ನಿರೀಕ್ಷೆ ಮೂಡಿಸಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande