
ಬೆಂಗಳೂರು, 08 ಜೂನ್ (ಹಿ.ಸ.) :
ಆ್ಯಂಕರ್ : ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿರುವ ಜನತಾ ದಳ (ಜಾತ್ಯತೀತ) ಪಕ್ಷವು, ಕಾಂಗ್ರೆಸ್ ಪಕ್ಷದ ರಾಜಕೀಯ ನೈತಿಕತೆಯನ್ನು ಪ್ರಶ್ನಿಸಿ ತೀವ್ರ ವಾಗ್ದಾಳಿ ನಡೆಸಿದೆ.
ಜೆಡಿಎಸ್ ತನ್ನ ಎಕ್ಸ್ ಖಾತೆಯಲ್ಲಿ ಪ್ರಕಟಿಸಿರುವ ಹೇಳಿಕೆಯಲ್ಲಿ, ಮಿಸ್ಟರ್ ವಸೂಲಿವಾಲಾ ಸುರ್ಜೇವಾಲಾ, ಜೆಡಿಎಸ್ ಬಗ್ಗೆ ಮಾತನಾಡುವ ಮುನ್ನ ಕಾಂಗ್ರೆಸ್ನ ಕರಾಳ ಇತಿಹಾಸವನ್ನು ಒಮ್ಮೆ ನೆನಪಿಸಿಕೊಳ್ಳಿ ಎಂದು ಟೀಕಿಸಿದೆ.
1997ರಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಪ್ರಧಾನಿ ಹುದ್ದೆಯಿಂದ ಕೆಳಗಿಳಿಸಲು ಕಾಂಗ್ರೆಸ್ ಕುತಂತ್ರ ನಡೆಸಿತ್ತು ಎಂದು ಆರೋಪಿಸಿರುವ ಜೆಡಿಎಸ್, ಆ ಘಟನೆಯನ್ನು ಕನ್ನಡಿಗರು ಕಳೆದ ಮೂರು ದಶಕಗಳಿಂದ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದೆ. ಅಲ್ಲದೆ, 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೂ ಕಾಂಗ್ರೆಸ್ ನಾಯಕರೇ ಕಾರಣ ಎಂದು ದೂರಿದೆ.
ಕಾಂಗ್ರೆಸ್ ಪಕ್ಷವು ಒಳಗೆ ಜಾತ್ಯತೀತತೆಯ ಮುಖವಾಡ ಧರಿಸಿಕೊಂಡು ಹೊರಗೆ ಜಾತಿ ರಾಜಕಾರಣ ನಡೆಸುತ್ತಿದೆ ಎಂದು ಆರೋಪಿಸಿರುವ ಜೆಡಿಎಸ್, ಮಾಜಿ ಪ್ರಧಾನಿಗಳಾದ ಪಿ.ವಿ. ನರಸಿಂಹರಾವ್ ಹಾಗೂ ಡಾ. ಮನಮೋಹನ್ ಸಿಂಗ್ ಅವರೊಂದಿಗೆ ಕಾಂಗ್ರೆಸ್ ನಾಯಕತ್ವ ನಡೆದುಕೊಂಡ ರೀತಿಯನ್ನೂ ಉಲ್ಲೇಖಿಸಿದೆ.
ತಮಿಳುನಾಡಿನಲ್ಲಿ ಡಿಎಂಕೆ ಜೊತೆ ಚುನಾವಣಾ ಮೈತ್ರಿ ಮಾಡಿಕೊಂಡ ಬಳಿಕ ಕಾಂಗ್ರೆಸ್ ಅನುಸರಿಸಿದ ರಾಜಕೀಯ ನಿಲುವುಗಳನ್ನು ಪ್ರಶ್ನಿಸಿರುವ ಜೆಡಿಎಸ್, ತಮ್ಮ ಪಕ್ಷದ ಬಗ್ಗೆ ಮಾತನಾಡಲು ಕಾಂಗ್ರೆಸ್ಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದು ಹೇಳಿದೆ.
ಹೇಳಿಕೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ರಾಷ್ಟ್ರ ಕಂಡ ಮೇರು ನಾಯಕರು ಹಾಗೂ ಕನ್ನಡ ನಾಡು ಕಂಡ ಏಕೈಕ ಪ್ರಧಾನಿ ಎಂದು ಬಣ್ಣಿಸಿರುವ ಜೆಡಿಎಸ್, ಅವರ ವಿಚಾರದಲ್ಲಿ ರಾಜಕೀಯ ಮಾಡುವುದು ಕಾಂಗ್ರೆಸ್ನ ನೀಚತನದ ಪರಾಕಾಷ್ಠೆ ಎಂದು ಕಿಡಿಕಾರಿದೆ.
ಅಲ್ಲದೆ, ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿರುವ ಸುರ್ಜೇವಾಲಾ ಅವರು ದೇವೇಗೌಡರ ಬಗ್ಗೆ ಮಾತನಾಡುವುದನ್ನು ಬಿಟ್ಟು ತಮ್ಮ ಪಕ್ಷ ಮತ್ತು ಸರ್ಕಾರದಲ್ಲಿರುವ ಒಳಜಗಳ, ಒಳಸಂಚುಗಳನ್ನು ಹತ್ತಿಕ್ಕುವ ಕಡೆ ಗಮನ ಹರಿಸಲಿ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.