
ಬಾಗಲಕೋಟೆ, 08 ಜೂನ್ (ಹಿ.ಸ.) :
ಆಂಕರ್ : ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚಕರು ವ್ಯಕ್ತಿಯೊಬ್ಬರನ್ನು ಹೆದರಿಸಿ, ನಕಲಿ ಎಫ್ಐಆರ್ ತೋರಿಸಿ ಹಾಗೂ ಕ್ರಿಪ್ಟೋ ಕರೆನ್ಸಿ ವ್ಯವಹಾರಗಳ ಮೂಲಕ ಬರೋಬ್ಬರಿ ₹83.22 ಲಕ್ಷ ಹಣ ಪಡೆದು ವಂಚಿಸಿರುವ ಪ್ರಕರಣ ಬಾಗಲಕೋಟೆ ಜಿಲ್ಲೆಯ ನವನಗರದಲ್ಲಿ ಬೆಳಕಿಗೆ ಬಂದಿದೆ.
ಈ ಕುರಿತು ನಗರದ ಸಿಇಎನ್ (ಸೈಬರ್ ಕ್ರೈಂ, ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಮಾಹಿತಿಯ ಪ್ರಕಾರ, ನವನಗರದ 59 ವರ್ಷದ ವ್ಯಕ್ತಿಗೆ ಫೆಬ್ರವರಿ 22ರಂದು ಅಪರಿಚಿತರು ವಾಟ್ಸ್ಆ್ಯಪ್ ಮೂಲಕ ಕರೆ ಮಾಡಿ, ತಾವು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಅಧಿಕಾರಿಗಳು ಎಂದು ಪರಿಚಯಿಸಿಕೊಂಡಿದ್ದಾರೆ. ಬಳಿಕ ಅವರ ಹೆಸರಿನ ಹಾಗೂ ವಿಳಾಸದ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಮುಂಬೈನಲ್ಲಿ ಸಿಮ್ ಕಾರ್ಡ್ ಖರೀದಿಸಿ ಅಶ್ಲೀಲ ಸಂದೇಶಗಳನ್ನು ಕಳುಹಿಸಲಾಗುತ್ತಿದೆ ಎಂದು ಹೇಳಿ ಭಯ ಹುಟ್ಟಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಪ್ರಕರಣದಲ್ಲಿ ನೀವು ನಿರ್ದೋಷಿ ಎಂದು ಸಾಬೀತುಪಡಿಸಿಕೊಳ್ಳಬೇಕಾದರೆ ವಿಡಿಯೋ ಕಾಲ್ ಮೂಲಕ ವಿಚಾರಣೆಗೆ ಹಾಜರಾಗಬೇಕು ಎಂದು ಹೇಳಿ, ಹಲವು ದಿನಗಳ ಕಾಲ ಸಂಪರ್ಕದಲ್ಲಿರಿಸಿಕೊಂಡು ‘ಡಿಜಿಟಲ್ ಅರೆಸ್ಟ್’ ಮಾಡಿರುವಂತೆ ನಂಬಿಸಿದ್ದಾರೆ. ವಾಟ್ಸ್ಆ್ಯಪ್ ಮೂಲಕ ನಕಲಿ ಎಫ್ಐಆರ್ ಪ್ರತಿಯನ್ನು ಕಳುಹಿಸಿ, ಪ್ರಕರಣ ಗಂಭೀರವಾಗಿದೆ ಎಂದು ಮತ್ತಷ್ಟು ಆತಂಕ ಮೂಡಿಸಿದ್ದಾರೆ.
ಬ್ಯಾಂಕ್ ಖಾತೆ ಪರಿಶೀಲನೆ ನೆಪದಲ್ಲಿ ಹಣ ವರ್ಗಾವಣೆ ವಿಚಾರಣೆ ಪ್ರಕ್ರಿಯೆಯ ಭಾಗವಾಗಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಪರಿಶೀಲಿಸಬೇಕಾಗಿದೆ ಎಂದು ಹೇಳಿ, ಖಾತೆಯಲ್ಲಿದ್ದ ಹಣವನ್ನು ನಿರ್ದಿಷ್ಟ ಖಾತೆಗಳಿಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ವಂಚಕರ ಮಾತುಗಳನ್ನು ನಂಬಿದ ವ್ಯಕ್ತಿ ಫೆಬ್ರವರಿ 25ರಿಂದ ಏಪ್ರಿಲ್ 13ರವರೆಗೆ ವಿವಿಧ ಹಂತಗಳಲ್ಲಿ ₹14.61 ಲಕ್ಷ ಹಣವನ್ನು ಅವರ ಸೂಚನೆಯಂತೆ ವರ್ಗಾಯಿಸಿದ್ದಾರೆ.
ಚಿನ್ನಾಭರಣ ಮಾರಾಟ ಮಾಡಿ ₹30.61 ಲಕ್ಷ ಕಳುಹಿಸಿದ ಬಲಿಪಶು ಇದಾದ ಬಳಿಕವೂ ವಂಚಕರು ನಿರಂತರವಾಗಿ ಬೆದರಿಕೆ ಹಾಕುತ್ತಾ, ಪ್ರಕರಣದಿಂದ ಮುಕ್ತರಾಗಬೇಕಾದರೆ ಹೆಚ್ಚಿನ ಹಣ ಪಾವತಿಸಬೇಕೆಂದು ಒತ್ತಡ ಹೇರಿದ್ದಾರೆ. ಇದರಿಂದ ತೀವ್ರ ಆತಂಕಕ್ಕೊಳಗಾದ ವ್ಯಕ್ತಿ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಮಾರಾಟ ಮಾಡಿ, ಬ್ಯಾಂಕ್ ಖಾತೆಯಲ್ಲಿದ್ದ ಹಣದೊಂದಿಗೆ ಸೇರಿಸಿ ಮತ್ತೊಂದು ಖಾತೆಗೆ ₹30.61 ಲಕ್ಷ ವರ್ಗಾಯಿಸಿದ್ದಾರೆ.
ಕ್ರಿಪ್ಟೋ ವ್ಯಾಲೆಟ್ ಮೂಲಕ ₹38 ಲಕ್ಷ ವರ್ಗಾವಣೆ ಇಷ್ಟಕ್ಕೂ ಸುಮ್ಮನಾಗದ ವಂಚಕರು, ವ್ಯಕ್ತಿಯನ್ನು ಮತ್ತಷ್ಟು ಹೆದರಿಸಿ ಯುಎಸ್ಡಿಟಿ (USDT) ಮೂಲಕ ಹಣ ವರ್ಗಾಯಿಸಲು ಸೂಚಿಸಿದ್ದಾರೆ. ಇದಕ್ಕಾಗಿ ಅವರಿಂದ ಕ್ರಿಪ್ಟೋ ವ್ಯಾಲೆಟ್ ತೆರೆಯಿಸಿ, ಬಳಿಕ ಬೈನಾನ್ಸ್ ಕ್ರಿಪ್ಟೋ ವ್ಯಾಲೆಟ್ ವಿಳಾಸವೊಂದನ್ನು ಕಳುಹಿಸಿ ಅದಕ್ಕೆ ಹಣ ಜಮೆ ಮಾಡುವಂತೆ ಒತ್ತಾಯಿಸಿದ್ದಾರೆ.
ವಂಚಕರ ಬೆದರಿಕೆ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾದ ವ್ಯಕ್ತಿ, ಅವರು ನೀಡಿದ ಲಿಂಕ್ ಹಾಗೂ ಸೂಚನೆಗಳ ಪ್ರಕಾರ ₹38 ಲಕ್ಷ ಹಣವನ್ನು ಕ್ರಿಪ್ಟೋ ವ್ಯಾಲೆಟ್ಗೆ ವರ್ಗಾಯಿಸಿದ್ದಾರೆ. ಹೀಗೆ ಸುಮಾರು ಎರಡು ತಿಂಗಳ ಅವಧಿಯಲ್ಲಿ ಒಟ್ಟು ₹83.22 ಲಕ್ಷ ಹಣವನ್ನು ವಿವಿಧ ಖಾತೆಗಳು ಹಾಗೂ ಕ್ರಿಪ್ಟೋ ವ್ಯಾಲೆಟ್ಗಳಿಗೆ ಕಳುಹಿಸಿ ವಂಚನೆಗೆ ಒಳಗಾಗಿದ್ದಾರೆ.
ಮೋಸ ಅರಿತು ಪೊಲೀಸರಿಗೆ ದೂರು
ತಾವು ವಂಚಕರ ಬಲೆಗೆ ಬಿದ್ದಿರುವುದು ನಂತರ ಅರಿವಿಗೆ ಬಂದ ವ್ಯಕ್ತಿ, ಜೂನ್ 5ರಂದು ಬಾಗಲಕೋಟೆ ಸಿಇಎನ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಣ ವರ್ಗಾವಣೆಯ ವಿವರಗಳು, ಬ್ಯಾಂಕ್ ಖಾತೆಗಳು ಹಾಗೂ ಕ್ರಿಪ್ಟೋ ವ್ಯವಹಾರಗಳ ಕುರಿತು ತನಿಖೆ ಆರಂಭಿಸಿದ್ದಾರೆ.
ಸಾರ್ವಜನಿಕರಿಗೆ ಪೊಲೀಸರ ಎಚ್ಚರಿಕೆ
ಈ ಘಟನೆ ಹಿನ್ನೆಲೆಯಲ್ಲಿ ಸೈಬರ್ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ಯಾವುದೇ ಸರ್ಕಾರಿ ಇಲಾಖೆ ಅಥವಾ ತನಿಖಾ ಸಂಸ್ಥೆ ಫೋನ್ ಅಥವಾ ವಾಟ್ಸ್ಆ್ಯಪ್ ಮೂಲಕ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಪರಿಚಿತರಿಂದ ಬರುವ ಕರೆಗಳು, ನಕಲಿ ಎಫ್ಐಆರ್ಗಳು, ಹಣ ವರ್ಗಾವಣೆಗೆ ಒತ್ತಾಯಿಸುವ ಸಂದೇಶಗಳು ಹಾಗೂ ಕ್ರಿಪ್ಟೋ ಮೂಲಕ ಹಣ ಪಾವತಿಸಲು ಹೇಳುವವರ ಬಗ್ಗೆ ವಿಶೇಷ ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದ್ದಾರೆ.
ಸಂದೇಹಾಸ್ಪದ ಕರೆಗಳು ಬಂದರೆ ತಕ್ಷಣ ಸೈಬರ್ ಸಹಾಯವಾಣಿ 1930ಗೆ ಕರೆ ಮಾಡುವಂತೆ ಹಾಗೂ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಈ ಪ್ರಕರಣ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಅತಿದೊಡ್ಡ ಸೈಬರ್ ವಂಚನೆ ಪ್ರಕರಣಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / jyothi deshpande