ಮುಂಗಾರು ಮಳೆಯಲ್ಲಿ ನೈಸರ್ಗಿಕ ವಿಪತ್ತು ಎದುರಿಸಲು ಸಜ್ಜುಗೊಳ್ಳಲು ಸೂಚನೆ
ಮುಂಗಾರು ಮಳೆಯಲ್ಲಿ ನೈಸರ್ಗಿಕ ವಿಪತ್ತುಗಳನ್ನ ಎದುರಿಸಲು ಸಜ್ಜುಗೊಳ್ಳಲು ಸೂಚನೆ
ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ವಿಪತ್ತು ನಿರ್ವಹಣಾ ಸಭೆ ನಡೆಸಿದರು.


ಕೋಲಾರ, ಜೂನ್ ೦೮ (ಹಿ.ಸ) :

ಆ್ಯಂಕರ್ : ಮುಂಬರುವ ಮುಂಗಾರು ಮಳೆ ಹಾಗೂ ಯಾವುದೇ ರೀತಿಯ ನೈಸರ್ಗಿಕ ವಿಪತ್ತುಗಳನ್ನು ಸಮರ್ಥವಾಗಿ ಎದುರಿಸಲು ಕೋಲಾರ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ. ವಿಪತ್ತು ನಿರ್ವಹಣೆಯಲ್ಲಿ ಯಾವುದೇ ಹಂತದಲ್ಲೂ ಅಧಿಕಾರಿಗಳು ಕಿಂಚಿತ್ತೂ ನಿರ್ಲಕ್ಷ್ಯ ತೋರಬಾರದು. ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ವಿಳಂಬ ಧೋರಣೆ ಅನುಸರಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ 'ಜಿಲ್ಲಾ ವಿಪತ್ತು ನಿರ್ವಹಣೆ ಸಮಿತಿ'ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವರ್ಷದ ಪೂರ್ವ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ. ೭ ರಷ್ಟು ಮಳೆ ಕೊರತೆಯಾಗಿದೆ. ಆದರೆ, ಮುಂಬರುವ ನೈಋತ್ಯ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮಳೆಯಿಂದಾಗುವ ಅನಾಹುತಗಳನ್ನು ತಡೆಯಲು ಮತ್ತು ಮಳೆ ನೀರನ್ನು ಸಮರ್ಪಕವಾಗಿ ಕೃಷಿಗೆ ಬಳಸಿಕೊಳ್ಳಲು ಎಲ್ಲಾ ಇಲಾಖೆಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.

ಹವಾಮಾನ ವೈಪರೀತ್ಯದಿಂದ ಜಿಲ್ಲಾದ್ಯಂತ ಬರೋಬ್ಬರಿ ೧,೬೧೮ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆ ನಷ್ಟವಾಗಿದೆ. ಪರಿಹಾರ ವಿತರಣೆಗಾಗಿ ನಡೆಯುತ್ತಿರುವ ದತ್ತಾಂಶ ದಾಖಲಾತಿ ಪ್ರಕ್ರಿಯೆ ಶೇ. ೮೯ರಷ್ಟು ಮುಗಿದಿದೆ. ವಿಳಂಬ ಮಾಡುತ್ತಿರುವ ಕೆಜಿಎಫ್, ಮಾಲೂರು ಹಾಗೂ ಅತಿ ಹೆಚ್ಚು ಹಾನಿಗೊಳಗಾಗಿರುವ ಶ್ರೀನಿವಾಸಪುರ ತಾಲೂಕುಗಳ ಅಧಿಕಾರಿಗಳು ಕೇವಲ ೨ ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಶೇ. ೧೦೦ರಷ್ಟು ಪೂರ್ಣಗೊಳಿಸಬೇಕು ಎಂದರು.

ಜೊತೆಗೆ, ಇತ್ತೀಚಿನ 'ದಿಶಾ' ಸಮಿತಿ ಸಭೆಯ ನಿರ್ದೇಶನದಂತೆ, ಮಾವು ಗುಣಮಟ್ಟ ಕುಸಿತ, ರಫ್ತು ಸಮಸ್ಯೆಗಳು ಹಾಗೂ ಮಾರುಕಟ್ಟೆ ತಿರಸ್ಕಾರದ ಹಿಂದಿನ ಕಾರಣಗಳನ್ನು ನಿಖರವಾಗಿ ಅಧ್ಯಯನ ಮಾಡಲು ತಕ್ಷಣವೇ 'ತಜ್ಞರ ಸಮಿತಿ'ಯೊಂದನ್ನು ರಚಿಸುವಂತೆ ತೋಟಗಾರಿಕಾ ಇಲಾಖೆಗೆ ಆದೇಶಿಸಿದರು.

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ೭೨ ರಿಂದ ೭೬ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಪ್ರಸ್ತುತ ೬,೪೭೪ ಕ್ವಿಂಟಾಲ್ ಬಿತ್ತನೆ ಬೀಜಗಳ ದಾಸ್ತಾನು ಇದ್ದು, ವಿಶೇಷವಾಗಿ ಶೇಂಗಾ ಬೀಜಕ್ಕೆ ಹೆಚ್ಚು ಬೇಡಿಕೆ ಬರುವ ನಿರೀಕ್ಷೆ ಇದೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಶೇಂಗಾ ಬೀಜಕ್ಕೆ ಕ್ವಿಂಟಾಲ್ ಗೆ ೭,೦೦೦ ದಿಂದ ೮,೦೦೦ ರೂ. ದರವಿದ್ದರೆ, ಕೃಷಿ ಇಲಾಖೆಯಿಂದ ಸಬ್ಸಿಡಿಯಡಿ ಕೇವಲ ೪,೫೦೦ ರೂ. ಗಳಿಗೆ ವಿತರಿಸಲಾಗುತ್ತಿದೆ. ಈ ಬಗ್ಗೆ ರೈತರಿಗೆ ವ್ಯಾಪಕ ಅರಿವು ಮೂಡಿಸಿ, ಸಕಾಲದಲ್ಲಿ ಬೀಜ ವಿತರಣೆಯಾಗುವಂತೆ ಕೃಷಿ ಇಲಾಖೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಶೇ. ೬೦ ರಿಂದ ೭೦ ರಷ್ಟು ರೈತರು ಕೇವಲ ಮಾವು ಬೆಳೆಯನ್ನೇ ಅವಲಂಬಿಸಿದ್ದಾರೆ. ಬೆಳೆ ನಷ್ಟದ ಸಂದರ್ಭದಲ್ಲಿ ರೈತರು ಆರ್ಥಿಕವಾಗಿ ಕುಸಿಯುವುದನ್ನು ತಪ್ಪಿಸಲು ಮಾವಿನ ತೋಟಗಳಲ್ಲಿ ಮಿಶ್ರಬೆಳೆಯಾಗಿ ರಾಗಿ, ಶೇಂಗಾ ಸೇರಿದಂತೆ ಇತರೆ ಬೆಳೆಗಳನ್ನು ಬೆಳೆಯಲು ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳು ಜಂಟಿಯಾಗಿ ರೈತರಿಗೆ ಪ್ರೋತ್ಸಾಹ ನೀಡಬೇಕು. ಅರಣ್ಯ ಇಲಾಖೆಯಿಂದ ಹೆಬ್ಬೇವು, ಶ್ರೀಗಂಧ, ಹಲಸು ಮತ್ತು ನೇರಳೆ ಸಸಿಗಳು ಲಭ್ಯವಿದ್ದು, ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ಕ್ಷೇತ್ರನಹಳ್ಳಿ ಸೇರಿದಂತೆ ಜಿಲ್ಲೆಯ ೧೩ ಹಳ್ಳಿಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಪ್ರಸ್ತುತ ೪ ಟ್ಯಾಂಕರ್ಗಳ ಮೂಲಕ ನೀರು ಪೂರೈಸಲಾಗುತ್ತಿದೆ. ವಿಫಲವಾಗಿರುವ ಬೋರ್ವೆಲ್ಗಳ ಬದಲಿಗೆ ಪರ್ಯಾಯ ಜಾಗ ಗುರುತಿಸಿ ಹೊಸ ಬೋರ್ವೆಲ್ ಕೊರೆಯುವ ಹಾಗೂ ಪೈಪ್ಲೈನ್ ಅಳವಡಿಸುವ ಕಾರ್ಯವನ್ನು ಟಾಸ್ಕ್ ಫೋರ್ಸ್ ಅನುಮೋದನೆಯೊಂದಿಗೆ ತ್ವರಿತವಾಗಿ ಮುಗಿಸಬೇಕು. ಮಳೆಯಿಂದ ಹಾನಿಗೊಳಗಾಗಿರುವ ೧೧೦ ವಿದ್ಯುತ್ ಕಂಬಗಳ ಪೈಕಿ ೪೮ ಕಂಬಗಳನ್ನು ದುರಸ್ತಿ ಮಾಡಲಾಗಿದ್ದು, ಉಳಿದ ಕಂಬಗಳನ್ನು ಮುಂದಿನ ೨-೩ ದಿನಗಳಲ್ಲಿ ಸರಿಪಡಿಸಿ, ಹಳ್ಳಿಗಳಿಗೆ ನಿರಂತರ ವಿದ್ಯುತ್ ಒದಗಿಸಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕಾ ಕಾರ್ಯ ಶೇ. ೯೭ ರಷ್ಟು ಮುಗಿದಿದ್ದು, ಬಾಕಿ ಉಳಿದಿರುವ ಲಸಿಕಾ ಕಾರ್ಯವನ್ನು ಕೂಡಲೇ ಪೂರ್ಣಗೊಳಿಸಬೇಕು. ಸಮಾಧಾನಕರ ಸಂಗತಿಯೆAದರೆ, ಚರ್ಮಗಂಟು ರೋಗದ ಯಾವುದೇ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿಲ್ಲ. ಮುಂದಿನ ೧೬ ವಾರಗಳಿಗೆ ಆಗುವಷ್ಟು ಜಾನುವಾರು ಮೇವಿನ ದಾಸ್ತಾನು ಲಭ್ಯವಿದೆ.

ಜೊತೆಗೆ, ಮಳೆಗಾಲದಲ್ಲಿ ಡೆಂಗ್ಯೂ, ಮಲೇರಿಯಾದಂತಹ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಸಜ್ಜಾಗಿರಬೇಕು. ಸಾರ್ವಜನಿಕರ ರಕ್ತದ ಮಾದರಿ ಪರೀಕ್ಷೆಗಳನ್ನು ಹೆಚ್ಚಿಸಬೇಕು ಎಂದು ಸೂಚಿಸಿದರು.

ಸಭೆಯ ಕೊನೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿಕಾರಿಗಳು, ಯಾವುದೇ ಇಲಾಖೆಯ ಅಧಿಕಾರಿಗಳು ಸಮನ್ವಯತೆಯ ಕೊರತೆ ಅಥವಾ ಸಿಬ್ಬಂದಿ ಕೊರತೆಯ ನೆಪ ಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸದ ಅಧಿಕಾರಿಗಳು ಹುದ್ದೆಯಲ್ಲಿ ಮುಂದುವರಿಯಲು ನಾಲಾಯಕ್. ವಿಪತ್ತು ನಿರ್ವಹಣೆಯಲ್ಲಿ ಯಾವುದೇ ಸಣ್ಣ ಲೋಪವಾದರೂ ಆಯಾ ಇಲಾಖೆಯ ಮುಖ್ಯಸ್ಥರನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಕಸ ವಿಲೇವಾರಿ ಕುರಿತಂತೆ ಅಸಮಾಧಾನ ತೋರಿದ ಜಿಲ್ಲಾಧಿಕಾರಿಗಳು, ಕೆಲವೆಡೆ ಪ್ಲಾಸ್ಟಿಕೆ ಸೇರಿದಂತೆ ಇತರ ತ್ಯಾಜ್ಯಗಳು ಸುರಿದಿರುವುದು ಕಂಡುಬAದಿದೆ. ಈ ಕೂಡಲೇ ಸಂಬAಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಅಪರ ಜಿಲ್ಲಾಧಿಕಾರಿ ಡಾ. ಎಸ್. ಎಂ. ಮಂಗಳ, ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ ಸರಿನಾ ಸಿಕ್ಕಲಿಗರ್,ಉಪವಿಭಾಗಧಿಕಾರಿ ಜಂಬಗಿ ರೇಣುಕಾಪ್ರಸಾದ್ ದಿಲೀಪ್, ಎಲ್ಲಾ ತಾಲ್ಲೂಕಿನ ತಹಸೀಲ್ದಾರ್, ತೋಟಗಾರಿಕೆ ಉಪನಿರ್ದೇಶಕ ಕುಮಾರಸ್ವಾಮಿ, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ರಮೇಶ್ ಸೇರಿದಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande