

ಸಂಡೂರು, 08 ಜೂನ್ (ಹಿ.ಸ.) :
ಆ್ಯಂಕರ್ : ಯೋಗ ಸನಾತನ ಋಷಿ ಪರಂಪರೆ ಮನುಕುಲಕ್ಕೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿದ್ದು, ಜೀವನದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಅಳವಡಿಸಿಕೊಳ್ಳುವುದರಿಂದ ರೋಗಮುಕ್ತ ಜೀವನ ಸಾಗಿಸಲು ಸಾಧ್ಯ ಎಂದು ಬಳ್ಳಾರಿ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ ಅಭಿಪ್ರಾಯಪಟ್ಟರು.
ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾನಿಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಹರಪನಹಳ್ಳಿಯ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಮತ್ತು ಸಹಜ ಜೀವನದ ಮಹತ್ವವನ್ನು ನಾವಿಂದು ಮರೆತಿದ್ದೇವೆ. ಆದರೆ ಪಾಶ್ಚಾತ್ಯರು ಇದನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿಯೇ ಯೋಗ ಇಂದು ವಿಶ್ವಮಾನ್ಯತೆ ಪಡೆದು ಎಲ್ಲೆಡೆ ಜನಪ್ರಿಯವಾಗುತ್ತಿದೆ. ನಾವು ಇನ್ನಾದರೂ ಎಚ್ಚೆತ್ತುಕೊಂಡು ಒತ್ತಡದ ಜೀವನದಲ್ಲಿ ದಿನಕ್ಕೆ ಒಂದು ಗಂಟೆಯನ್ನಾದರೂ ಯೋಗ- ಧ್ಯಾನಕ್ಕೆ ಮೀಸಲಿಡಬೇಕು ಎಂದು ಅವರು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಕೇಂದ್ರದ ನಿರ್ದೇಶಕ ಪ್ರೊ.ಎಚ್.ತಿಪ್ಪೇಸ್ವಾಮಿಯವರು ಭಾರತ ಜ್ಞಾನಪರಂಪರೆಗೆ ಹೆಸರಾದ ದೇಶ. ಚರಕ, ಸುಶ್ರುತರಂಥ ಮಹಾಯೋಗಿಗಳು ಇಡೀ ವಿಶ್ವಕ್ಕೇ ಅಪೂರ್ವ ಆಯುರ್ವೇದ ವೈದ್ಯವಿಜ್ಞಾನವನ್ನು ಪರಿಚಯಿಸಿದ್ದಾರೆ. ಆದರೆ ಪ್ರಕೃತಿ ಚಿಕಿತ್ಸೆ ನಮ್ಮ ಆರೋಗ್ಯವನ್ನು ನಾವೇ ಅರ್ಥ ಮಾಡಿಕೊಂಡು ಜೀವನಶೈಲಿಯನ್ನು ಮಾರ್ಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದ್ದು. ಉತ್ತಮ ಆಹಾರ- ವಿಹಾರ, ಆಚಾರ-ವಿಚಾರದೊಂದಿಗೆ ಶಿಸ್ತುಬದ್ಧ ಜೀವನಶೈಲಿಯನ್ನು ಅಳವಡಿಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ಆಸ್ಪತ್ರೆಯ ನಿರ್ದೇಶಕ ಮತ್ತು ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಮಾತನಾಡಿ, ಪಾಶ್ಚಾತ್ಯ ಜೀವನಶೈಲಿನ ಅಂಧಾನುಕರಣೆಯಿಂದ ಭಾರತದಲ್ಲಿ ಜೀವನಶೈಲಿ ರೋಗಗಳು ಅಪಾಯಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿವೆ. ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನಮಗೆ ನೀಡಿದ ಅನೇಕ ಅಂಶಗಳನ್ನು ನಾವಿಂದು ಮರೆತಿದ್ದೇವೆ. ಔಷಧ ರಹಿತವಾಗಿ ನಮ್ಮ ಜೀವನಶೈಲಿ ಮಾರ್ಪಡಿಸಿಕೊಳ್ಳುವ ಮೂಲಕ ಮರೆತ ಅಂಶಗಳನ್ನು ನಮಗೆ ಪ್ರಕೃತಿ ಚಿಕಿತ್ಸಾ ಪದ್ಧತಿ ನೆನಪಿಸುತ್ತಿದೆ. ಈ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರತಿಪಾದಿಸಿದರು.
ಉತ್ತಮ ಆಹಾರ ಪದ್ಧತಿ ಅನುಸರಿಸುವ ಜತೆಗೆ ಯೋಗ, ಪ್ರಾಣಾಯಾಮ, ಧ್ಯಾನದಂಥ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಜೀವನಶೈಲಿ ರೋಗಗಳು ಬಾರದಂತೆ ತಡೆಯಬಹುದು. ತುರ್ತು ಹಾಗೂ ಶಸ್ತ್ರಚಿಕಿತ್ಸೆ ಹೊರತುಪಡಿಸಿ ಎಲ್ಲ ರೋಗಗಳಿಗೆ ಈ ಔಷಧಿ ರಹಿರ ವೈದ್ಯಪದ್ಧತಿಯಲ್ಲಿ ಚಿಕಿತ್ಸೆ ಇದ್ದು, ಇದರ ಪ್ರಯೋಜನ ಪಡೆದು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.
ರೋಗ ಬಾರದಂತೆ ತಡೆಯುವ, ಬಂದ ರೋಗವನ್ನು ಗುಣಪಡಿಸುವ ಹಾಗೂ ದೇಹವನ್ನು ಸದೃಢವಾಗಿ ಇರಿಸುವ ಚಿಕಿತ್ಸಾ ಸೌಲಭ್ಯಗಳು ಪ್ರಕೃತಿ ಚಿಕಿತ್ಸಾ ಪದ್ಧತಿಯಲ್ಲಿವೆ. ಈ ಪದ್ಧತಿಯಡಿ ಲಭ್ಯವಿರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ನಿರಂತರವಾಗಿ ಎಲ್ಲೆಡೆ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ವಿವರಿಸಿದರು.
ಭಾರತೀಯ ಆಹಾರ- ವಿಹಾರ, ಆಚಾರ- ವಿಚಾರಗಳು ಮನೋದೈಹಿಕ ಆರೋಗ್ಯಕ್ಕೆ ಪೂರಕ. ಮನಸ್ಸು ಮತ್ತು ದೇಹದ ಸಮತೋಲನ ಕಾಪಾಡಿಕೊಳ್ಳುವುದೇ ಉತ್ತಮ ಆರೋಗ್ಯದ ಗುಟ್ಟು ಎಂದು ಆಧುನಿಕ ವಿಜ್ಞಾನವೂ ಒಪ್ಪಿಕೊಳ್ಳುತ್ತದೆ ಎಂದರು.
ವಿವಿ ಕ್ರಿಡಾ ನಿರ್ದೇಶಕ ಡ.ಶಶಿಧರ ಕೆಲ್ಲೂರ್ ಮಾತನಾಡಿ, ತಕ್ಷಣಕ್ಕೆ ಶಮನ ನೀಡುವ ಅಲೋಪತಿ ವೈದ್ಯಪದ್ಧತಿಯ ಅಡ್ಡ ಪರಿಣಾಮಗಳ ಹಿನ್ನೆಲೆಯಲ್ಲಿ ಜನ ಇಂದು ಕೈಗೆಟುಕುವ ಮತ್ತು ಸಹಜ ಚಿಕಿತ್ಸಾ ವಿಧಾನವಾದ ಪ್ರಕೃತಿ ಚಿಕಿತ್ಸೆಯತ್ತ ವಾಲುತ್ತಿದ್ದಾರೆ. ಮಧ್ಯ ಕರ್ನಾಟಕದಲ್ಲೇ ಅತ್ಯುತ್ತಮ ಪ್ರಕೃತಿ ಸೌಲಭವನ್ನು ಇದೀಗ ಜನನಿ ಆಸ್ಪತ್ರೆ ಕಲ್ಪಿಸಿಕೊಟ್ಟಿದ್ದು, ಈ ಭಾಗದ ಜನತೆ ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಜನನಿ ಸಮೂಹ ಸಂಸ್ಥೆಗಳ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್, ಸ್ನಾತಕೋತ್ತರ ಕೇಂದ್ರದ ಸಹಾಯಕ ಕ್ರೀಡಾ ನಿರ್ದೇಶಕ ಶಿವರಾಮಪ್ಪ ರಾಗಿ, ಕ್ರೀಡಾ ಸಹಾಯಕ ಪಾಪಯ್ಯ ಕಣಿವೆಹಳ್ಳಿ ಉಪಸ್ಥಿತರಿದ್ದರು. ಡಾ.ಮಲ್ಲಯ್ಯ ಕಾರ್ಯಕ್ರಮ ನಿರೂಪಿಸಿದರು. 150ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್