
ಬೆಂಗಳೂರು, 10 ಜೂನ್ (ಹಿ.ಸ.) :
ಆ್ಯಂಕರ್ : ಸಚಿವರಿಗೆ ಖಾತೆ ಹಂಚಿಕೆ ಬಳಿಕ ಉಂಟಾಗಿರುವ ಅಸಮಾಧಾನ ಮತ್ತು ಬಿಕ್ಕಟ್ಟಿನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ದೆಹಲಿಗೆ ತೆರಳಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಖಾತೆ ಹಂಚಿಕೆ ವಿಚಾರದ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರಿಗೆ ಬಿಡಿಎ ಮತ್ತು ಬಿಎಂಆರ್ಡಿಎ ಅಧಿಕಾರ ನೀಡದಿರುವುದರಿಂದ ಅವರು ಅಸಮಾಧಾನಗೊಂಡಿದ್ದು, ಈವರೆಗೆ ಇಲಾಖೆಯ ಅಧಿಕಾರ ವಹಿಸಿಕೊಂಡಿಲ್ಲ. ಈ ವಿಚಾರವನ್ನು ಹೈಕಮಾಂಡ್ ಗಮನಕ್ಕೆ ತರಲು ಅವರೂ ದೆಹಲಿಗೆ ತೆರಳಿದ್ದಾರೆ ಎನ್ನಲಾಗಿದೆ.
ಇದೇ ವೇಳೆ ಕೆ.ಹೆಚ್. ಮುನಿಯಪ್ಪ ಹಾಗೂ ರಾಮಲಿಂಗಾ ರೆಡ್ಡಿ ಸೇರಿದಂತೆ ಕೆಲ ಸಚಿವರು ತಮ್ಮ ಖಾತೆಗಳ ಬಗ್ಗೆ ಅಸಮಾಧಾನ ಹೊಂದಿದ್ದು, ಖಾತೆ ಬದಲಾವಣೆ ಕುರಿತ ಚರ್ಚೆಯೂ ನಡೆಯುವ ಸಾಧ್ಯತೆ ಇದೆ.
ಇದರ ಜೊತೆಗೆ ಖಾಲಿ ಇರುವ ಸಚಿವ ಸ್ಥಾನಗಳ ಭರ್ತಿ ಹಾಗೂ ಸಂಪುಟ ವಿಸ್ತರಣೆ ಬಗ್ಗೆ ಸಹ ಹೈಕಮಾಂಡ್ ಜೊತೆ ಸಿಎಂ ಚರ್ಚೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 20ಕ್ಕೂ ಹೆಚ್ಚು ಖಾಲಿ ಸ್ಥಾನಗಳಿಗೆ ಹಲವರು ಪೈಪೋಟಿ ನಡೆಸುತ್ತಿರುವುದರಿಂದ ಜಾತಿ ಮತ್ತು ಪ್ರಾದೇಶಿಕ ಸಮತೋಲನದ ಆಧಾರದಲ್ಲಿ ಸಚಿವರ ಆಯ್ಕೆ ಕುರಿತು ಸಮಾಲೋಚನೆ ನಡೆಯುವ ಸಾಧ್ಯತೆ ಇದೆ.
ಇದೇ ವೇಳೆ ನೀತಿ ಆಯೋಗದ ಸಭೆಯಲ್ಲಿ ಮುಖ್ಯಮಂತ್ರಿ ಶಿವಕುಮಾರ್ ಭಾಗವಹಿಸಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh.M.B.