ಖಜಾನೆ ಖಾಲಿ ಮಾಡಿಕೊಂಡು ಕೂತ ದರಿದ್ರ ಸರಕಾರ : ಅಶೋಕ್
ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ಮತ್ತು ಬಸ್ ಪಾಸ್ ವಿತರಣೆಯಲ್ಲಿ ವಿಳಂಬ ರಾಜ್ಯ ಸರ್ಕಾರದ ವಿರುದ್ಧ ಅಶೋಕ ವಾಗ್ದಾಳಿ
Ashok file photo


ಬೆಂಗಳೂರು, 10 ಜೂನ್ (ಹಿ.ಸ.) :

ಆ್ಯಂಕರ್ : ಶಾಲಾ ಮಕ್ಕಳಿಗೆ ಶೂ, ಸಾಕ್ಸ್ ಮತ್ತು ರಿಯಾಯಿತಿ ಬಸ್ ಪಾಸ್ ವಿತರಣೆಯಲ್ಲಿ ಉಂಟಾಗಿರುವ ವಿಳಂಬವನ್ನು ಖಂಡಿಸಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಕಾಂಗ್ರೆಸ್ ಸರ್ಕಾರದ ಆರ್ಥಿಕ ದುಸ್ಥಿತಿಯಿಂದ ಬಡ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.

ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ ಘೋಷಣೆ ಮಾಡಲಾಗಿತ್ತು. ಆದರೆ ಇದೀಗ ಆ ಭರವಸೆ ಈಡೇರದೇ ಉಳಿದಿದ್ದು, ರಿಯಾಯಿತಿ ಬಸ್ ಪಾಸ್ ವಿತರಣೆ ಸ್ಥಗಿತಗೊಂಡಿರುವ ಕಾರಣ ಶಾಲಾ ಮಕ್ಕಳು ಪೂರ್ಣ ಪ್ರಮಾಣದ ಪ್ರಯಾಣ ದರ ಪಾವತಿಸಿ ಶಾಲೆಗೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಶೂ ಮತ್ತು ಸಾಕ್ಸ್ ವಿತರಣೆ ಆಗದಿರುವುದರಿಂದ ಅನೇಕ ಬಡ ಮಕ್ಕಳು ಬರಿಗಾಲಲ್ಲೇ ಶಾಲೆಗೆ ಹೋಗುವ ಸ್ಥಿತಿ ಎದುರಿಸುತ್ತಿದ್ದಾರೆ ಎಂದು ಅಶೋಕ್ ಹೇಳಿದ್ದಾರೆ.

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ಸಮರ್ಪಕವಾಗಿ ಆಗದಿರುವುದು ಹಾಗೂ ಪ್ರವೇಶಾತಿ ಪ್ರಮಾಣ ಕುಸಿಯುತ್ತಿರುವುದು ಈಗಾಗಲೇ ಆತಂಕಕಾರಿ ಬೆಳವಣಿಗೆಯಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿಫಲವಾದರೆ ಸರ್ಕಾರಿ ಶಾಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಉಳಿದಿರುವ ವಿಶ್ವಾಸವೂ ಕುಸಿಯುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಿಕ್ಷಣ ಇಲಾಖೆಗೆ ಸಮರ್ಪಕ ನಾಯಕತ್ವದ ಕೊರತೆ ಕಂಡುಬರುತ್ತಿದ್ದು, ಸರ್ಕಾರ ತನ್ನ ಆಂತರಿಕ ರಾಜಕೀಯ ಮತ್ತು ಖಾತೆ ಹಂಚಿಕೆ ವಿವಾದಗಳಿಂದ ಹೊರಬಂದು ವಿದ್ಯಾರ್ಥಿಗಳ ಸಮಸ್ಯೆಗಳತ್ತ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಕ್ಕಳ ಹಿತಾಸಕ್ತಿಗೆ ಆದ್ಯತೆ ನೀಡಿ ತಕ್ಷಣವೇ ಶೂ, ಸಾಕ್ಸ್ ಹಾಗೂ ಇತರೆ ಅಗತ್ಯ ಸೌಲಭ್ಯಗಳನ್ನು ವಿದ್ಯಾರ್ಥಿಗಳಿಗೆ ಪೂರೈಸುವಂತೆ ರಾಜ್ಯ ಸರ್ಕಾರಕ್ಕೆ ಅಶೋಕ್ ಆಗ್ರಹಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande