ಅಮಾನವೀಯ ಬಹಿಷ್ಕಾರ : 600 ರೂ. ವಿವಾದಕ್ಕೆ ಏಳು ಕುಟುಂಬ ಹೊರಹಾಕಿದವರ ವಿರುದ್ಧ ಎಫ್ಐ.ಆರ್
ಬಾಗಲಕೋಟೆ, 02 ಮೇ (ಹಿ.ಸ.) : ಆಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಕೇವಲ 600 ರೂಪಾಯಿ ಪಟ್ಟಿ ಹಣದ ವಿಚಾರಕ್ಕೆ ಏಳು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದ ಅಮಾನವೀಯ ಘಟನೆಗೆ ಕೊನೆಗೂ ಕಾನೂನು ಕ್ರಮದ ಸ್ಪರ್ಶ ದೊರೆತಿದೆ. ಪ್ರಕರಣ ಬೆಳಕಿಗೆ ಬಂದ ತಕ್ಷಣ
ಬಹಿಷ್ಕಾರ


ಬಾಗಲಕೋಟೆ, 02 ಮೇ (ಹಿ.ಸ.) :

ಆಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಣಸೀಕಟ್ಟಿ ಗ್ರಾಮದಲ್ಲಿ ಕೇವಲ 600 ರೂಪಾಯಿ ಪಟ್ಟಿ ಹಣದ ವಿಚಾರಕ್ಕೆ ಏಳು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ವಿಧಿಸಿದ್ದ ಅಮಾನವೀಯ ಘಟನೆಗೆ ಕೊನೆಗೂ ಕಾನೂನು ಕ್ರಮದ ಸ್ಪರ್ಶ ದೊರೆತಿದೆ.

ಪ್ರಕರಣ ಬೆಳಕಿಗೆ ಬಂದ ತಕ್ಷಣ ಎಚ್ಚೆತ್ತ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ, ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ಕ್ರಮ ಕೈಗೊಂಡಿದೆ.

ಹನುಮಂತ ದೇವರ ಓಕುಳಿ ಜಾತ್ರೆಗೆ ಸಂಬಂಧಿಸಿದ ಪಟ್ಟಿ ಹಣ ನೀಡದಿದ್ದ ಕಾರಣ ಏಪ್ರಿಲ್ 5ರಂದು ಗ್ರಾಮದಲ್ಲಿ ಕೆಲವು ಹಿರಿಯರು ಸೇರಿ ಏಳು ಕುಟುಂಬಗಳನ್ನು ದೈವದಿಂದ ಹೊರಗಿಟ್ಟು ಬಹಿಷ್ಕಾರ ಘೋಷಿಸಿದ್ದರು. ಡಂಗುರ ಸಾರಿಸುವ ಮೂಲಕ ಈ ನಿರ್ಧಾರವನ್ನು ಗ್ರಾಮದೆಲ್ಲೆಡೆ ಪ್ರಕಟಿಸಲಾಗಿದ್ದು, ಆ ಕುಟುಂಬಗಳಿಗೆ ಪೂಜಾರಿಗಳು ಮತ್ತು ಸ್ವಾಮೀಜಿಗಳು ಹೋಗಬಾರದು, ಕಿರಾಣಿ ಅಂಗಡಿಗಳಲ್ಲಿ ವಸ್ತುಗಳನ್ನು ನೀಡಬಾರದು ಎಂಬಂತೆ ಕಟ್ಟುನಿಟ್ಟಿನ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈ ಕ್ರಮದಿಂದಾಗಿ ಕುಟುಂಬಗಳು ಸಾಮಾಜಿಕ ಹಾಗೂ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದವು.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಜಮಖಂಡಿಯ ಕಂದಾಯ ಅಧಿಕಾರಿ ಮಂಜುನಾಥ್ ನೀಡಿದ ದೂರಿನ ಮೇರೆಗೆ ಜಮಖಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್ಐಆರ್ ದಾಖಲಾಗಿದ್ದು, ಡಂಗುರ ಸಾರಿದ ಪ್ರಭು ಹೂಗಾರ ಸೇರಿದಂತೆ ಈ ಕೃತ್ಯಕ್ಕೆ ಕಾರಣರಾದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದೇ ವೇಳೆ ಸಂತ್ರಸ್ತರಾದ ಯಲ್ಲಪ್ಪ ಛಗಣ್ಣವರ ಸೇರಿದಂತೆ ಇತರ ಕುಟುಂಬಗಳು ತಮಗೆ ಆಗಿರುವ ಅವಮಾನ ಮತ್ತು ಅನ್ಯಾಯದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಕೇವಲ ಸಮಾಧಾನ ಸಭೆಗಳಿಂದ ಸಮಸ್ಯೆ ಪರಿಹಾರವಾಗುವುದಿಲ್ಲ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬುದು ಅವರ ಒತ್ತಾಯವಾಗಿದೆ.

ಆದರೆ ಎಫ್ಐಆರ್ನಲ್ಲಿ ಪ್ರಮುಖ ಆರೋಪಿಗಳ ಹೆಸರುಗಳನ್ನು ಸ್ಪಷ್ಟವಾಗಿ ನಮೂದಿಸದೇ ‘ಇತರರು’ ಎಂದು ಉಲ್ಲೇಖಿಸಿರುವುದು ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ಮೂಲಕ ಕೆಲ ಪ್ರಭಾವಿಗಳನ್ನು ರಕ್ಷಿಸಲು ಪ್ರಯತ್ನ ನಡೆಯುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ.

ಸಾಮಾಜಿಕ ಬಹಿಷ್ಕಾರದಂತಹ ಅಮಾನವೀಯ ಪದ್ಧತಿಗಳಿಗೆ ಕಟ್ಟುನಿಟ್ಟಿನ ಕ್ರಮ ಅಗತ್ಯವಿದ್ದು, ಈ ಪ್ರಕರಣದಲ್ಲಿ ನ್ಯಾಯ ಸಿಗುವಂತೆ ಅಧಿಕಾರಿಗಳು ತ್ವರಿತ ಮತ್ತು ಪಾರದರ್ಶಕ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಿಂದ ಆಗ್ರಹ ಕೇಳಿ ಬರುತ್ತಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande