
ವಿಜಯಪುರ, 02 ಮೇ (ಹಿ.ಸ.) :
ಆಂಕರ್ : ಗೌತಮ ಬುದ್ಧ ಬೋಧಿಸಿದ ಅಷ್ಟಾಂಗ ಮಾರ್ಗವು ಮಾನವ ಜೀವನಕ್ಕೆ ದಿಕ್ಕು ತೋರಿಸುವ ಶಾಶ್ವತ ಮೌಲ್ಯಗಳ ಸಂಕೇತವಾಗಿದ್ದು, ಪ್ರತಿಯೊಬ್ಬರೂ ಅದನ್ನು ತಮ್ಮ ದಿನನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಹೇಳಿದರು.
ವಿಜಯಪುರ ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪಜಾ/ಪಪಂ ಘಟಕದ ಸಹಯೋಗದಲ್ಲಿ ಆಯೋಜಿಸಲಾದ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬುದ್ಧರು ಅನುಸರಿಸಿದ ಜೀವನ ಮಾರ್ಗವು ವ್ಯಕ್ತಿಯ ಒಳಗಿನ ಶಾಂತಿ ಹಾಗೂ ಸಮಾಜದ ಸಮಗ್ರ ಅಭಿವೃದ್ಧಿಗೆ ಪೂರಕವಾಗುತ್ತದೆ ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಬುದ್ಧರು ವಿಶ್ವದ ಮೊದಲ ಶಾಂತಿದೂತರಾಗಿದ್ದು, ಅವರ ಶಾಂತಿ ಸಂದೇಶಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು. ಪ್ರಾಧ್ಯಾಪಕ ಪ್ರೊ. ರಾಜಕುಮಾರ ಪಿ. ಮಾಲಿಪಾಟೀಲ್ ಮಾತನಾಡಿ, ಬುದ್ಧನ ತತ್ವಗಳು ಇಂದಿನ ಸಮಾಜಕ್ಕೆ ಮಾರ್ಗದರ್ಶಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊ. ಹನುಮಂತಯ್ಯಾ ಪೂಜಾರಿ, ಪ್ರೊ. ಉದಯಕುಮಾರ ಕುಲಕರ್ಣಿ, ಡಾ. ಅಕ್ಷಯ ಯಾರ್ದಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ಸ್ನಾತಕ, ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಸಂಜೀವಕುಮಾರ ಗಿರಿ ಕಾರ್ಯಕ್ರಮ ನಿರೂಪಿಸಿ ಸ್ವಾಗತಿಸಿದರು. ಪಜಾ/ಪಪಂ ಘಟಕದ ಉಪನಿರ್ದೇಶಕ ಡಾ. ಬಾಬು ಆರ್. ಎಲ್. ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande