ಸಾರಿಗೆ ನೌಕರರ ಮುಷ್ಕರ ; ಅಶೋಕ ವಾಗ್ದಾಳಿ
ಬೆಂಗಳೂರು, 14 ಮೇ (ಹಿ.ಸ.) : ಆ್ಯಂಕರ್ : ರಾಜ್ಯದ ಶಕ್ತಿ ಯೋಜನೆಯ ಹೊರೆಯಿಂದ ಸಾರಿಗೆ ನಿಗಮಗಳು ಸಂಪೂರ್ಣ ನಿಶ್ಯಕ್ತಗೊಂಡಿದ್ದು, ಕುಸಿತದ ಅಂಚಿಗೆ ತಲುಪಿವೆ ಎಂದು ಪ್ರತಿ ಪಕ್ಷದ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮೇ 20ರಿಂದ ಸಾರಿಗೆ ನೌಕರರು ಮತ್ತೆ ಮುಷ್
Ashok


ಬೆಂಗಳೂರು, 14 ಮೇ (ಹಿ.ಸ.) :

ಆ್ಯಂಕರ್ : ರಾಜ್ಯದ ಶಕ್ತಿ ಯೋಜನೆಯ ಹೊರೆಯಿಂದ ಸಾರಿಗೆ ನಿಗಮಗಳು ಸಂಪೂರ್ಣ ನಿಶ್ಯಕ್ತಗೊಂಡಿದ್ದು, ಕುಸಿತದ ಅಂಚಿಗೆ ತಲುಪಿವೆ ಎಂದು ಪ್ರತಿ ಪಕ್ಷದ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮೇ 20ರಿಂದ ಸಾರಿಗೆ ನೌಕರರು ಮತ್ತೆ ಮುಷ್ಕರಕ್ಕೆ ಮುಂದಾಗಿರುವುದು ರಾಜ್ಯ ಸರ್ಕಾರದ ದಿವಾಳಿತನದ ಆಡಳಿತಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದು ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

ಶೇ 25ರಷ್ಟು ವೇತನ ಹೆಚ್ಚಳಕ್ಕೆ ಬೇಡಿಕೆ ಇಟ್ಟಿದ್ದ ನೌಕರರಿಗೆ ಸರ್ಕಾರ ಏಕಪಕ್ಷೀಯವಾಗಿ ಕೇವಲ 12.5 ಶೇಕಡಾ ವೇತನ ಹೆಚ್ಚಳ ಘೋಷಿಸಿರುವುದು ನೌಕರರ ಹೋರಾಟಕ್ಕೆ ಮಾಡಿದ ಅವಮಾನವಾಗಿದೆ ಎಂದು ಅಶೋಕ ಟೀಕಿಸಿದ್ದಾರೆ.

ಕೇವಲ ಚುನಾವಣಾ ಲಾಭಕ್ಕಾಗಿ ಗ್ಯಾರೆಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸ ಖಾಲಿ ಮಾಡಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಈಗ ನೌಕರರ ಸಂಬಳ ನೀಡಲೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೌಕರರ ಸಂಕಷ್ಟಗಳಿಗೆ ಸ್ಪಂದಿಸುವ ಬದಲು ಮೌನ ವಹಿಸಿರುವುದು ಸರ್ಕಾರದ ನಿರ್ಲಕ್ಷ್ಯ ಮತ್ತು ಅಸಮರ್ಥತೆಯ ಪರಾಕಾಷ್ಠೆಯಾಗಿದೆ ಎಂದು ಅಶೋಕ ಕಿಡಿಕಾರಿದ್ದಾರೆ.

ಸಾರಿಗೆ ನೌಕರರು ಪದೇ ಪದೇ ಬೀದಿಗಿಳಿದರೂ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದ್ದು, ಕಾರ್ಮಿಕ ವಿರೋಧಿ ಮನೋಭಾವವನ್ನು ಹಲವು ಬಾರಿ ಪ್ರದರ್ಶಿಸಿದೆ. ಈಗ ನೌಕರರ ಮುಷ್ಕರದಿಂದ ರಾಜ್ಯದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಅಸ್ತವ್ಯಸ್ತವಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದರೂ ಸರ್ಕಾರ ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡು ನೌಕರರನ್ನು ಮತ್ತಷ್ಟು ಕೆರಳಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದ ಜನತೆಗೆ ತೊಂದರೆ ಉಂಟಾಗುವ ಮುನ್ನವೇ ಸರ್ಕಾರ ನೌಕರರ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಸಮಸ್ಯೆ ಪರಿಹರಿಸಬೇಕು ಎಂದು ಅಶೋಕ ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande