
ಬಾಗಲಕೋಟೆ, 14 ಮೇ (ಹಿ.ಸ.) :
ಆಂಕರ್ : ಬಾಗಲಕೋಟೆ ನಗರದ ಪ್ರಮುಖ ಹಾಗೂ ಜನನಿಬಿಡ ಪ್ರದೇಶವಾಗಿರುವ ಜಿಲ್ಲಾಸ್ಪತ್ರೆ ಎದುರಿನ ಬಸ್ ನಿಲ್ದಾಣ ಭಾಗದಲ್ಲಿ ಟಂಟಂ ವಾಹನಗಳ ಅಕ್ರಮ ಮತ್ತು ಅಸ್ತವ್ಯಸ್ತ ನಿಲುಗಡೆ ದಿನೇ ದಿನೇ ಹೆಚ್ಚುತ್ತಿದ್ದು, ಸಾರ್ವಜನಿಕರು ಹಾಗೂ ಸಾರಿಗೆ ಸಂಸ್ಥೆಯ ಬಸ್ ಚಾಲಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಆಸ್ಪತ್ರೆ ಎದುರಿನ ಮುಖ್ಯ ರಸ್ತೆಯಲ್ಲೇ ಟಂಟಂ ಚಾಲಕರು ಬೇಕಾಬಿಟ್ಟಿಯಾಗಿ ವಾಹನಗಳನ್ನು ನಿಲ್ಲಿಸುತ್ತಿರುವುದರಿಂದ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಜಿಲ್ಲಾಸ್ಪತ್ರೆಗೆ ನಿತ್ಯ ಸಾವಿರಾರು ರೋಗಿಗಳು, ಅವರ ಸಂಬಂಧಿಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗಮಿಸುತ್ತಾರೆ. ಇದೇ ಪ್ರದೇಶದಲ್ಲಿ ಬಸ್ ನಿಲ್ದಾಣವೂ ಇರುವುದರಿಂದ ಪ್ರಯಾಣಿಕರ ಓಡಾಟ ಹೆಚ್ಚಿರುತ್ತದೆ. ಆದರೆ ಟಂಟಂ ವಾಹನಗಳು ಬಸ್ ನಿಲ್ದಾಣದ ಸುತ್ತಮುತ್ತ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಬಸ್ಸುಗಳಿಗೆ ನಿಲುಗಡೆ ಮಾಡಲು ಸೂಕ್ತ ಸ್ಥಳವೇ ಸಿಗದ ಪರಿಸ್ಥಿತಿ ಉಂಟಾಗಿದೆ.
ಕೆಲವೊಮ್ಮೆ ರಸ್ತೆ ಮಧ್ಯ ಭಾಗದಲ್ಲೇ ಟಂಟಂಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಕರೆಯುವ ಕೆಲಸ ನಡೆಯುತ್ತಿದ್ದು, ಇದರಿಂದ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ.
ಸರ್ಕಾರಿ ಬಸ್ ಚಾಲಕರು ಮತ್ತು ನಿರ್ವಾಹಕರು ಸಹ ವಾಹನ ತಿರುಗಿಸಲು ಹಾಗೂ ಪ್ರಯಾಣಿಕರನ್ನು ಸುರಕ್ಷಿತವಾಗಿ ಏರಿಳಿಸಲು ಕಷ್ಟಪಡುವಂತಾಗಿದೆ. ಆಸ್ಪತ್ರೆ ಭಾಗದಲ್ಲಿ ಆಂಬುಲೆನ್ಸ್ ಸಂಚಾರಕ್ಕೂ ಅಡ್ಡಿಯಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಸ್ಥಳೀಯರ ಪ್ರಕಾರ, ಈ ಸಮಸ್ಯೆ ಹೊಸದಲ್ಲ. ಹಲವು ತಿಂಗಳಿನಿಂದ ಟಂಟಂ ಚಾಲಕರ ನಿರ್ಲಕ್ಷ್ಯ ಹಾಗೂ ನಿಯಮ ಉಲ್ಲಂಘನೆ ನಡೆಯುತ್ತಿದ್ದರೂ ಸಂಚಾರಿ ಪೊಲೀಸರು ಯಾವುದೇ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಜನಸಂದಣಿ ಹೆಚ್ಚಿರುವ ಸಮಯದಲ್ಲಿಯೂ ಪೊಲೀಸರು ಸೂಕ್ತ ನಿಗಾವಹಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
“ಪ್ರತಿದಿನ ಇದೇ ದೃಶ್ಯ. ಬಸ್ ನಿಲ್ಲಲು ಜಾಗ ಇಲ್ಲ, ಜನರು ರಸ್ತೆಯಲ್ಲೇ ನಿಲ್ಲಬೇಕು. ಟಂಟಂ ಚಾಲಕರು ತಮ್ಮ ಇಷ್ಟ ಬಂದಂತೆ ವಾಹನ ನಿಲ್ಲಿಸುತ್ತಿದ್ದಾರೆ. ಪೊಲೀಸರು ನೋಡಿದರೂ ಕ್ರಮ ಕೈಗೊಳ್ಳುವುದಿಲ್ಲ,” ಎಂದು ಸಾರ್ವಜನಿಕರು ದೂರಿದ್ದಾರೆ.
ನಗರದ ಶಿಸ್ತುಬದ್ಧ ವಾಹನ ಸಂಚಾರ ಕಾಪಾಡಬೇಕಾದ ಸಂಚಾರಿ ಪೊಲೀಸರು ಕೂಡಲೇ ಕ್ರಮ ಕೈಗೊಂಡು ಆಸ್ಪತ್ರೆ ಎದುರಿನ ಬಸ್ ನಿಲ್ದಾಣ ಪ್ರದೇಶವನ್ನು ಅತಿಕ್ರಮಣ ಮತ್ತು ಅಕ್ರಮ ನಿಲುಗಡೆಯಿಂದ ಮುಕ್ತಗೊಳಿಸಬೇಕು. ಟಂಟಂ ವಾಹನಗಳಿಗೆ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಕಲ್ಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande