
ವಿಜಯಪುರ, 14 ಮೇ (ಹಿ.ಸ.) :
ಆಂಕರ್ : ಒಂದು ಕಾಲದಲ್ಲಿ ಬರಗಾಲ, ನೀರಿನ ಕೊರತೆ ಮತ್ತು ಬತ್ತಿದ ಭೂಮಿಗೆ ಹೆಸರಾಗಿದ್ದ ವಿಜಯಪುರ ಜಿಲ್ಲೆ ಇಂದು ಹಸಿರು ಕ್ರಾಂತಿಯ ಪ್ರತೀಕವಾಗಿ ಹೊರಹೊಮ್ಮಿದೆ. ಕೆರೆಗಳು, ಕಾಲುವೆಗಳು, ಬಾಂದಾರ-ಬಾವಡಿಗಳು ಪುನಶ್ಚೇತನಗೊಂಡಿದ್ದು, ಪರಿಸರ ಸಂರಕ್ಷಣೆ ಹಾಗೂ ಜಲ ಸಂರಕ್ಷಣೆಯ ಸಮನ್ವಯದಿಂದ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ಕೈಗೊಂಡಿರುವ ಪರಿಸರಪರ ಹಾಗೂ ಜಲಾಧಾರಿತ ಅಭಿವೃದ್ಧಿ ಕಾರ್ಯಗಳಿಂದ 1.5 ಕೋಟಿಗೂ ಹೆಚ್ಚು ಮರಗಳನ್ನು ನೆಟ್ಟು ಬೆಳೆಸಲಾಗಿದೆ. ಪರಿಣಾಮವಾಗಿ ಒಣನಾಡು ಎಂದೇ ಕರೆಯಲ್ಪಡುತ್ತಿದ್ದ ಬಸವನಾಡಿನಲ್ಲಿ ಈಗ ಹಸಿರು ಸಿರಿ ಮೇಳೈಸಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಪ್ರಮಾಣ, ಭೂಗರ್ಭ ಜಲಮಟ್ಟ ಹಾಗೂ ಪರಿಸರ ಸಮತೋಲನದಲ್ಲಿಯೂ ಉತ್ತಮ ಬದಲಾವಣೆ ಕಂಡುಬರುತ್ತಿದೆ.
ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೆರೆಗಳ ಹೂಳೆತ್ತುವಿಕೆ, ಕಾಲುವೆಗಳ ಅಭಿವೃದ್ಧಿ, ಬಾಂದಾರ-ಬಾವಡಿಗಳ ಪುನರುಜ್ಜೀವನ, ಮಳೆ ನೀರು ಸಂಗ್ರಹಣೆ ಮತ್ತು ವೃಕ್ಷಾರೋಪಣೆಯಂತಹ ಕಾರ್ಯಗಳಿಗೆ ಜನಸಹಭಾಗಿತ್ವದ ಸ್ಪಂದನೆ ದೊರೆತಿದೆ. ರೈತರು, ಯುವಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ವಿವಿಧ ಸಂಘಟನೆಗಳು ಹಸಿರು ಅಭಿಯಾನದಲ್ಲಿ ಕೈಜೋಡಿಸಿರುವುದು ವಿಶೇಷ.
“ಒಂದು ದಿಟ್ಟ ದೃಷ್ಟಿಕೋನ ಮತ್ತು ನಿರಂತರ ಪರಿಶ್ರಮದಿಂದ ಬರಗಾಲದ ನೆನಪುಗಳಿಂದ ಹಸುರಿನ ನವಚರಿತ್ರೆಯತ್ತ ಸಾಗಲು ಸಾಧ್ಯವಾಗಿದೆ” ಎಂದು ಪರಿಸರ ಹೋರಾಟಗಾರರು ಹಾಗೂ ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ವಿಜಯಪುರದ ಈ ಅಭಿವೃದ್ಧಿ ಮಾದರಿ ಈಗ ರಾಜ್ಯ ಮಾತ್ರವಲ್ಲ, ರಾಷ್ಟ್ರದ ಗಮನ ಸೆಳೆಯುತ್ತಿದೆ.
ಪರಿಸರ ಸಂರಕ್ಷಣೆಗೆ ಮತ್ತಷ್ಟು ಬಲ ತುಂಬುವ ಉದ್ದೇಶದಿಂದ 2030ರೊಳಗೆ 5 ಕೋಟಿ ಮರಗಳನ್ನು ಬೆಳೆಸುವ ಮಹತ್ವಾಕಾಂಕ್ಷಿ ಗುರಿಯನ್ನು ಹೊಂದಲಾಗಿದೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬ ನಾಗರಿಕರೂ ಭಾಗಿಯಾಗಬೇಕು ಎಂಬ ಸಂದೇಶವನ್ನು ವಿವಿಧ ಸಂಘಟನೆಗಳು ನೀಡುತ್ತಿವೆ.
ಬಸವನಾಡಿನ ಈ ಹಸಿರು ಪಯಣವು ಕೇವಲ ಪರಿಸರ ಸಂರಕ್ಷಣೆಯಲ್ಲ, ಮುಂದಿನ ಪೀಳಿಗೆಗೆ ಉತ್ತಮ ಬದುಕಿನ ಭರವಸೆಯ ಸಂಕೇತವಾಗಿದ್ದು, ಅಭಿವೃದ್ಧಿಯ ಹೊಸ ಅಧ್ಯಾಯಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande