

ಕೊಪ್ಪಳ, 14 ಮೇ (ಹಿ.ಸ.) :
ಆ್ಯಂಕರ್ : ನಗರಸಭೆ ಆವರಣದಲ್ಲಿ ನಡೆಯುತ್ತಿರುವ 196ನೇ ದಿನದ ಧರಣಿಯಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿಕೆ ನೀಡಿ, ದಿ: 18.05.2026ರಂದು ಸೋಮವಾರ ಹೋರಾಟ 200 ದಿನ ತಲುಪುತ್ತದೆ.
ಅಂದು ಧರಣಿ ವೇದಿಕೆಯಲ್ಲಿ ಬಹಿರಂಗ ಸಭೆ ನಡೆಸಲಾಗುತ್ತದೆ. ಬಹಿರಂಗ ಸಭೆಯಲ್ಲಿ ಆರ್ಥಿಕ ತಜ್ಞ, ಹಂಪಿ ವಿವಿ ನಿವೃತ್ತ ಪ್ರಾಧ್ಯಾಪಕ ಟಿ.ಆರ್.ಚಂದ್ರಶೇಖರ, ನಿರ್ಮಲ ತುಂಗಭದ್ರಾ ಆಂದೋಲನದ ಗಂಗಾವತಿ ನಿವಾಸಿ ಡಾ. ಶಿವಕುಮಾರ ಮಾಲಿಪಾಟೀಲ್ ಅತಿಥಿಗಳಾಗಿ ಆಗಮಿಸಿ ಧರಣಿಗೆ ಬೆಂಬಲಿಸಿ ಮಾತನಾಡುತ್ತಾರೆ. ಕೊಪ್ಪಳ ನಗರ ಮತ್ತು ಕಾರ್ಖಾನೆ ಬಾಧಿತ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ವಿಶೇಷ ಧರಣಿ ಹೋರಾಟದಲ್ಲಿ ಭಾಗವಹಿಸಬೇಕೆಂದು ವೇದಿಕೆ ಮೂಲಕ ಮನವಿ ಮಾಡಿದರು.
ಬಲ್ಡೋಟ ಕಾರ್ಖಾನೆ ಮಾಲಿನ್ಯದಿಂದ ಕೊಪ್ಪಳ ಭಾಗ್ಯನಗರದ ಒಂದೂವರೆ ಲಕ್ಷ ಜನರ ಜೀವ, ಆರೋಗ್ಯ ಭವಿಷ್ಯ ಖಾತರಿಪಡಿಸಬೇಕು. ಗವಿಶ್ರೀಗಳು ಧರ್ಮಾದೇಶ ಮಾಡಿರುವಂತೆ ಬಲ್ಡೋಟ ವಿಸ್ತರಣೆಯ ಅನುಮತಿಯನ್ನು ವಾಪಸ್ ಪಡೆದ ಪತ್ರವನ್ನು ಜನಪ್ರತಿನಿಧಿಗಳು ತರಬೇಕು. ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು 2011ರಿಂದ ಬಲ್ಡೋಟ ಎಂಎಸ್ಪಿಎಲ್ ಪೆಲ್ಲೆಟ್ ಘಟಕದಿಂದ ನಗರದ ಅರ್ಧ ವಾರ್ಡಗಳು ಮಾಲಿನ್ಯ ಬಾಧಿವಾಗುತ್ತಿದ್ದು, ಇಲ್ಲಿರುವ ಜನರ ಮೇಲಾಗುವ ಆರೋಗ್ಯದ ದುಷ್ಪರಿಣಾಮ ತಡೆಯಲು ಈ ಪೆಲ್ಲೆಟ್ ಘಟಕ ಬಂದ್ ಮಾಡಿ, ನಗರದ ಜನರ ಆರೋಗ್ಯ ಉಳಿಸಬೇಕು.
ಬಲ್ಡೋಟ ಕಂಪನಿ ಬಸಾಪುರ ಕೆರೆಯನ್ನು ಅನಧಿಕೃತವಾಗಿ ಮಂಜೂರಿ ಪಡೆದಿದ್ದು ಸುತ್ತಲಿನ ಸಾವಿರಾರು ಜಾನುವಾರು ನೀರು ಕುಡಿಯಲು ಕಾಂಪೌಂಡ್ ತೆರವು ಮಾಡಿ ಅವಕಾಶ ಮಾಡಿಕೊಡಬೇಕು. ತುಂಗಭದ್ರಾ ನೀರು ವಿಷಗೊಳಿಸುವ ಮಾಲಿನ್ಯಕಾರಿ ಕಾರ್ಖಾನೆಗಳನ್ನು ಮುಚ್ಛಬೇಕು. ಹಿರೇಬಗನಾಳ, ಅಲ್ಲಾನಗರ ಪಕ್ಕದ ಸ್ಪಾಂಜ್ ಐರನ್ ಕಾರ್ಖಾನೆಗಳನ್ನು ಕೇಂದ್ರ ಪರಿಸರ ಇಲಾಖೆ ವರದಿಯ ಶಿಫಾರಸಿನಂತೆ ನಿರ್ಜನ ಪ್ರದೇಶಕ್ಕೆ ಸ್ಥಳಾಂತರಿಸಬೇಕು. ಸರ್ಕಾರ ಕಾರ್ಖಾನೆ ಧೂಳು ಬಾಧಿತ 22 ಹಳ್ಳಿಗಳ ಪುನರುಜ್ಜೀವನ ಮಾಡಲು ವಿಶೇಷ ಪ್ಯಾಕೇಜ್ ಘೋಷಿಸಬೇಕು.
ಎ.ಐ.ಐ.ಎಂ.ಎಸ್ ಸಂಸ್ಥೆ ಮತ್ತು ಐ.ಐ.ಎಸ್.ಸಿ ಸಂಸ್ಥೆಯಿಂದ ಜನರ ಆರೋಗ್ಯ ಮತ್ತು ಪರಿಸರ ಹಾನಿಯ ಸಮೀಕ್ಷೆ ನಡೆಸಬೇಕು ಎಂದು ಜಿಲ್ಲಾ ಬಚಾವೋ ಆಂದೋಲನ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ಧರಣಿ ಹೋರಾಟ ನಡೆಸಲಾಯಿತು.
ಧರಣಿಯಲ್ಲಿ ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಪ್ರಕಾಶಕ ಡಿ ಎಂ. ಬಡಿಗೇರ, ಗವಿಸಿದ್ದಪ್ಪ ವದ್ನಾಳ ಬಗನಾಳ, ರಾಜಶೇಖರ ಏಳುಬಾವಿ, ನಿವೃತ್ತ ಪ್ರಾಚಾರ್ಯ ಬಿ.ಜಿ. ಕರಿಗಾರ, ಮಹಾದೇವಪ್ಪ ಮಾವಿನಮಡು, ನಾಗರಾಜ ಕುಷ್ಟಗಿ ಲಾಚನಕೇರಿ, ಬಸವರಾಜಪ್ಪ ಶೆಟ್ಟರ್, ಸತೀಶ ಹುಳ್ಳಿ ಕಿನ್ನಾಳ, ವಿಜಯಮಹಾಂತೇಶ ಹಟ್ಟಿ, ಗಂಗಮ್ಮ ಕುರುಗೋಡು, ಮಂಜುನಾಥ ಕವಲೂರು, ಶಿವಪ್ಪ ಜಲ್ಲಿ, ರಹೀಮ್ ತೆಗ್ಗಿನಮನಿ, ಭೀಮಪ್ಪ ಯಲಬುರ್ಗಾ ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್