
ಬಾಗಲಕೋಟೆ, 14 ಮೇ (ಹಿ.ಸ.) :
ಆಂಕರ್ : ಉತ್ತಮ ಆಡಳಿತ ವ್ಯವಸ್ಥೆ, ಗ್ರಾಹಕರ ವಿಶ್ವಾಸ ಮತ್ತು ಪ್ರಮಾಣಿಕತೆಯೇ ಯಾವುದೇ ಬ್ಯಾಂಕಿನ ಬೆಳವಣಿಗೆಗೆ ಮೂಲ ಆಧಾರವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದ ಶ್ರೀ ವೀರಪುಲಿಕೇಶಿ ವಿದ್ಯಾವರ್ಧಕ ಸಂಸ್ಥೆಯ ಆವರಣದಲ್ಲಿ ಗುರುವಾರ ನಡೆದ ಶ್ರೀ ವೀರಪುಲಿಕೇಶಿ ಸಹಕಾರಿ ಬ್ಯಾಂಕಿನ ನೂತನ ಪ್ರಧಾನ ಕಚೇರಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ದಿವಂಗತ ಕೆ.ಎಂ. ಪಟ್ಟಣಶೆಟ್ಟಿ ಅವರು ಸ್ಥಾಪಿಸಿದ ಈ ಬ್ಯಾಂಕ್ ಇಂದು ಉತ್ತರ ಕರ್ನಾಟಕದಲ್ಲಿಯೇ ಜನಪ್ರಿಯ ಹಾಗೂ ವಿಶ್ವಾಸಾರ್ಹ ಸಹಕಾರಿ ಬ್ಯಾಂಕ್ ಆಗಿ ಬೆಳೆದಿರುವುದು ಸಂತಸದ ಸಂಗತಿ ಎಂದು ಶ್ಲಾಘಿಸಿದರು.
ಕೇಂದ್ರ ಸರ್ಕಾರ ಪ್ರತ್ಯೇಕ ಸಹಕಾರ ಇಲಾಖೆ ಸ್ಥಾಪಿಸಿರುವುದು ಸಹಕಾರಿ ಕ್ಷೇತ್ರಕ್ಕೆ ಮತ್ತಷ್ಟು ಬಲ ತುಂಬಿದ್ದು, ಗ್ರಾಮೀಣ ಭಾಗದ ಜನರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ತ್ವರಿತ ಸಾಲ ಸೌಲಭ್ಯಗಳು ದೊರೆಯುತ್ತಿವೆ ಎಂದು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸಾಲ ಮಂಜೂರಿಗೆ ವಿಳಂಬವಾಗುವ ಸಂದರ್ಭಗಳಿದ್ದರೂ, ಸಹಕಾರಿ ಬ್ಯಾಂಕುಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸುಲಭವಾಗಿ ಸಾಲ ಸಿಗುತ್ತದೆ. ಇದರಿಂದ ರೈತರು, ಸಣ್ಣ ವ್ಯಾಪಾರಿಗಳು ಹಾಗೂ ಮಧ್ಯಮ ವರ್ಗದ ಜನರಿಗೆ ಹೆಚ್ಚಿನ ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ಉಪ ಮುಖ್ಯಮಂತ್ರಿ ಹಾಗೂ ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಮಾತನಾಡಿ, ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಹಿರಿಯ ನಾಯಕರ ಕೊಡುಗೆ ಅಪಾರವಾಗಿದೆ ಎಂದರು. ಪ್ರತಿಯೊಬ್ಬರೂ ದುಡಿದು ಭವಿಷ್ಯಕ್ಕಾಗಿ ಉಳಿತಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಯುವಕರು ತಮ್ಮ ಆದಾಯದ ಒಂದು ಭಾಗವನ್ನು ಉಳಿಸುವ ಮೂಲಕ ಆರ್ಥಿಕ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಬ್ಯಾಂಕ್ಗಳ ಮೂಲಕ ಅನೇಕ ಜನರಿಗೆ ಉದ್ಯೋಗ, ಸಾಲ ಹಾಗೂ ಆರ್ಥಿಕ ನೆರವು ದೊರೆಯುತ್ತಿದೆ. ಗ್ರಾಮೀಣ ಪ್ರದೇಶಗಳ ಪಿಕೆಪಿಎಸ್ಗಳ ಮೂಲಕ ರೈತರಿಗೆ ಸಾಲ ಸೌಲಭ್ಯ ದೊರೆಯುತ್ತಿರುವುದು ಸಹಕಾರಿ ಕ್ಷೇತ್ರದ ದೊಡ್ಡ ಸಾಧನೆ ಎಂದು ಹೇಳಿದರು. ಹಿಂದೆ ಕೆಲವೇ ಶ್ರೀಮಂತ ರೈತರಿಗೆ ಸೌಲಭ್ಯ ಸೀಮಿತವಾಗಿದ್ದರೂ, ಬ್ಯಾಂಕ್ ರಾಷ್ಟ್ರೀಕರಣದ ನಂತರ ಎಲ್ಲ ವರ್ಗದ ಜನರಿಗೆ ಬ್ಯಾಂಕಿಂಗ್ ಸೇವೆಗಳು ಸುಲಭವಾಗಿ ಲಭ್ಯವಾಗಿವೆ ಎಂದು ವಿವರಿಸಿದರು.
ಸಂಸದ ಪಿ ಸಿ ಸಿದ್ದನಗೌಡರೆ ಮಾತನಾಡಿ, ಗ್ರಾಹಕರು ಪಡೆದ ಸಾಲವನ್ನು ಉದ್ದೇಶಪೂರಿತವಾಗಿ ಬಳಸಿ ಸಕಾಲಕ್ಕೆ ಮರುಪಾವತಿ ಮಾಡಿದಾಗ ಮಾತ್ರ ಬ್ಯಾಂಕ್ಗಳು ಆರ್ಥಿಕವಾಗಿ ಬಲವಾಗುತ್ತವೆ ಎಂದು ಹೇಳಿದರು. ಬ್ಯಾಂಕ್ಗಳ ಬೆಳವಣಿಗೆಗೆ ಗ್ರಾಹಕರ ಜವಾಬ್ದಾರಿಯುತ ನಡೆ ಮುಖ್ಯ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಿ ಹೆಚ್ ಪೂಜಾರ್ ಮಾತನಾಡಿ, ಸದುದ್ದೇಶದಿಂದ ಆರಂಭವಾದ ಶ್ರೀ ವೀರಪುಲಿಕೇಶಿ ಬ್ಯಾಂಕ್ ಇಂದು ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ಗಳಲ್ಲೊಂದು ಆಗಿ ಬೆಳೆದಿದೆ ಎಂದರು. ಸಂಸ್ಥಾಪಕರು ಶಿಕ್ಷಣ ಹಾಗೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾಡಿದ ಸೇವೆ ಶ್ಲಾಘನೀಯವಾಗಿದೆ. ಉಳಿತಾಯ ಮಾಡುವ ಅಭ್ಯಾಸ ವ್ಯಕ್ತಿಯ ಆರ್ಥಿಕ ಭದ್ರತೆಯನ್ನು ಹೆಚ್ಚಿಸುವುದಲ್ಲದೆ, ಸಮಾಜದ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ ಎಂದು ಹೇಳಿದರು.ಬ್ಯಾಂಕಿನ ಅಧ್ಯಕ್ಷ ಹಾಗೂ ಮಾಜಿ ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ದ ರಾಜಯೋಗೇಂದ್ರ ಮಹಾಸ್ವಾಮಿಗಳು, ಹಾಲಕೆರೆ ಅನ್ನದಾನೇಶ್ವರ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹಾಗೂ ಹಾವೇರಿ ಹುಕ್ಕೇರಿ ಮಠದ ಡಾ. ಸದಾಶಿವ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರ ಪುತ್ಥಳಿ ಅನಾವರಣಗೊಳಿಸಲಾಯಿತು. ಬ್ಯಾಂಕಿನ ಹಿಂದಿನ ಅಧ್ಯಕ್ಷರ ಭಾವಚಿತ್ರಗಳನ್ನೂ ಅನಾವರಣ ಮಾಡಲಾಯಿತು. ಕಟ್ಟಡ ನಿರ್ಮಾಣದಲ್ಲಿ ಶ್ರಮಿಸಿದ ಶಿಲ್ಪಿಗಳು, ಗುತ್ತಿಗೆದಾರರು ಹಾಗೂ ಸಹಕಾರ ನೀಡಿದವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬ್ಯಾಂಕಿನ ನಿರ್ದೇಶಕರು, ನಿರ್ದೇಶಕಿಯರು, ವಿವಿಧ ಗಣ್ಯರು, ಸಹಕಾರಿ ಕ್ಷೇತ್ರದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande