
ಕೊಪ್ಪಳ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲಿನ ತಾಪಮಾನವು ಹೆಚ್ಚಾಗುತ್ತಿರುವುದರಿಂದ, ಭಕ್ತರು ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ದರ್ಶನ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿಗಳಾದ ಡಾ. ಸುರೇಶ ಬಿ. ಇಟ್ನಾಳ ಅವರು ಆದೇಶ ಹೊರಡಿಸಿದ್ದಾರೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕರಾಂಪೂರದ ಅಂಜನಾದ್ರಿ ಬೆಟ್ಟದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಕೊಪ್ಪಳ ಜಿಲ್ಲೆ ಮತ್ತು ಹೊರ ಜಿಲ್ಲೆ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಾರೆ. ವಿಶೇಷವಾಗಿ ಪ್ರತಿ ಶನಿವಾರ ಮತ್ತು ರವಿವಾರದಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಕಳೆದ 3 ತಿಂಗಳಿನಲ್ಲಿ ಇಬ್ಬರು ಭಕ್ತರು ಜಯೇಶ ತಂದೆ ಸುರೇಶ ಯಾದವ ವಯಸ್ಸು 17 ವರ್ಷ ಸಾ: ಹುಲಗಿ ಹಾಗೂ ಅರ್ಜುನ ಭಾಯಿ ತಂದೆ ರಾಮಾಜಿಭಾಯಿ ವಯಸ್ಸು 54 ವರ್ಷ ಸಾ: ಪದನ ಜಿ: ಕುಜ್ (ಗುಜರಾತ್) ಎಂಬುವವರು ದೇವಸ್ಥಾನದ 575 ಮೆಟ್ಟಿಲುಗಳನ್ನು ಏರಿ ಮೇಲೆ ಹೋದ ನಂತರ ಉಸಿರಾಡಲು ತೊಂದರೆಯಾಗಿ ಮೃತಪಟ್ಟಿರುತ್ತಾರೆ.
ಅಲ್ಲದೇ ಏಪ್ರಿಲ್ 01 ರಂದು ಮದ್ಯಾಹ್ನ 1 ಗಂಟೆಯ ಸುಮಾರಿಗೆ ಆಂಜನೇಯ ದೇವಸ್ಥಾನಕ್ಕೆ ಆಗಮಿಸಿದ್ದ ಭಕ್ತನೊಬ್ಬ ಗರ್ಭಗುಡಿಯಲ್ಲಿ ಕುಳಿತು ದರ್ಶನ ಮುಗಿಸುತ್ತಿದ್ದಂತೆ ಬಿಸಿಲಿನ ತಾಪಕ್ಕೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಜರುಗಿದ್ದು, ಮೃತನನ್ನು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಗುಳ್ಳದಳ್ಳಿ ಗ್ರಾಮದ ನಿವಾಸಿ ಕೃಷ್ಣ ರಾಜಪ್ ಜಿ.ಎಸ್ ವಯಸ್ಸು 57 ವರ್ಷ ಎಂದು ಗುರುತಿಸಲಾಗಿದೆ. ಈತನು ಮಧ್ಯಹ್ನದ ವೇಳೆಯಲ್ಲಿ ಅಂಜನೇಯ ದೇವಸ್ಥಾನದ ಮೆಟ್ಟಿಲುಗಳನ್ನು ಏರಿದ ಬಳಿಕ ದೇವಸ್ಥಾನದ ಒಳಗೆ ಉಸಿರಾಟದ ಸಮಸ್ಯೆಯಾಗಿ ಮೃತಪಟ್ಟಿರುವ ಘಟನೆ ಜರುಗಿರುತ್ತದೆ.
ಎಪ್ರೀಲ್ ಮತ್ತು ಮೇ ತಿಂಗಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಲು ಇರುವುದರಿಂದ ಅಂಜನಾದ್ರಿ ದೇವಸ್ಥಾನದ ಸುತ್ತಮುತ್ತ ಸಂಪೂರ್ಣ ಕಲ್ಲು, ಬಂಡೆಗಳು ಇದ್ದು, ಬಿಸಿಲಿನ ಜಳಕ್ಕೆ ಹೆಚ್ಚಿನ ಶಾಖ ಉಂಟಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿರುತ್ತದೆ. ಅಲ್ಲದೇ ಭಕ್ತರು ಬಿಸಿಲಿನಲ್ಲಿ ದೇವಸ್ಥಾನದ ಸುಮಾರು 575 ಮೆಟ್ಟಿಲುಗಳನ್ನು ಏರುವುದರಿಂದ ಅವರು ಸುಸ್ತಾಗಿ, ಉಸಿರಾಟಕ್ಕೆ ತೊಂದರೆ ಉಂಟಾಗಿ ಕುಸಿದು ಬೀಳುವ ಸಾದ್ಯತೆ ಇರುತ್ತದೆ. ಕಾರಣ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೇಸಿಗೆಯ, ಬಿಸಿಲಿನ ತಾಪ ಹೆಚ್ಚಾಗುತ್ತಿರುವುದರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ದೇವಸ್ಥಾನದ ಮೆಟ್ಟಿಲು ಏರಿ ಹೋಗಿ ದರ್ಶನ ಪಡೆಯಲು ನಿಷೇಧ ಮಾಡುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಕೋರಿರುತ್ತಾರೆ.
ಅದರಂತೆ, ಕೊಪ್ಪಳ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬೇಸಿಗೆ ಬಿಸಿಲಿನ ತಾಪಮಾನವು ಹೆಚ್ಚಾಗುತ್ತಿರುವುದರಿಂದ, ಭಕ್ತರು ಆರೋಗ್ಯದ ಹಿತದೃಷ್ಟಿಯಿಂದ ದೇವಸ್ಥಾನದ ದರ್ಶನದ ಸಮಯವನ್ನು ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ದೇವಸ್ಥಾನದ ಮೆಟ್ಟಿಲು ಏರಿ ಹೋಗಿ ದರ್ಶನ ಪಡೆಯಲು ನಿಷೇಧ ಮಾಡಲು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಸಹ ಕೋರಿರುತ್ತಾರೆ.
ಆದ್ದರಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಚಿಕ್ಕರಾಂಪೂರ ಗ್ರಾಮದ ಅಂಜನಾದ್ರಿ ಬೆಟ್ಟದ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನಕ್ಕೆ ರಾಜ್ಯ-ಹೊರರಾಜ್ಯಗಳಿಂದ ಭಕ್ತಾದಿಗಳು ಆಗಮಿಸುತ್ತಿದ್ದು, ಏಪ್ರೀಲ್, ಮೇ ತಿಂಗಳಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಭಕ್ತಾದಿಗಳಿಗೆ ಬೆಟ್ಟ ಹತ್ತುವಾಗ ಮತ್ತು ಇಳಿಯುವಾಗ ಹೆಚ್ಚಿನ ಬಿಸಿಲಿನ ತಾಪಮಾನದಿಂದ ಆರೋಗ್ಯದಲ್ಲಿ ಏರುಪೇರಾಗುವ ಸಂಭವಿಸಿರುತ್ತರಿಂದ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಬೆಳಗ್ಗೆ 11 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ದೇವಸ್ಥಾನದ ಮೆಟ್ಟಿಲು ಏರಿ ಹೋಗಿ ದರ್ಶನ ಪಡೆಯಲು ನಿಷೇಧ ಮಾಡಲಾಗಿದ್ದು, ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ದರ್ಶನದ ವೇಳೆಯನ್ನು ಭಕ್ತಾದಿಗಳ ಹಿತದೃಷ್ಟಿಯಿಂದ ಬೆಳಿಗ್ಗೆ 6 ಗಂಟೆಯಿಂದ 11 ಗಂಟೆಯವರೆಗೆ ಮತ್ತು ಸಾಯಂಕಾಲ 4 ಗಂಟೆಯಿಂದ 6 ಗಂಟೆಯವರೆಗೆ ಮಾತ್ರ ದೇವರ ದರ್ಶನಕ್ಕೆ ಸಮಯವನ್ನು ನಿಗದಿಪಡಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್