

ಬೆಂಗಳೂರು, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ ನಾಲ್ಕು ಚಿರತೆಗಳನ್ನು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಡ ರಾತ್ರಿ ಸ್ವಾಗತಿಸಿದರು.
ಕಲಬುರಗಿ ಕಾರ್ಯಕ್ರಮ ಮುಗಿಸಿ ಹೈದರಾಬಾದ್ ಮಾರ್ಗವಾಗಿ ಬೆಂಗಳೂರಿಗೆ ಆಗಮಿಸಿದ ಸಚಿವರು, ನೇರವಾಗಿ ವಿಮಾನ ನಿಲ್ದಾಣದ ಸರಕು ಸಾಗಣೆ ವಿಭಾಗಕ್ಕೆ ತೆರಳಿ ಬನ್ನೇರುಘಟ್ಟ ಮೃಗಾಲಯಕ್ಕೆ ತರಲಾಗುತ್ತಿರುವ ಈ ವಿದೇಶಿ ಅತಿಥಿಗಳನ್ನು ಬರಮಾಡಿಕೊಂಡರು.
ಈ ಚಿರತೆಗಳಿಗೆ ಹವಾಮಾನ ಹಾಗೂ ವಾತಾವರಣ ಬದಲಾವಣೆಯಿಂದ ಯಾವುದೇ ತೊಂದರೆ ಆಗದಂತೆ ವಿಶೇಷ ಕಾಳಜಿ ವಹಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಕ್ವಾರಂಟೈನ್ ವ್ಯವಸ್ಥೆ, 30 ದಿನಗಳ ಆಹಾರ ವ್ಯವಸ್ಥೆ, ಆರೋಗ್ಯ ತಪಾಸಣೆ ಸೇರಿದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಪಶುವೈದ್ಯಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಚಿರತೆಗಳನ್ನು ಸುರಕ್ಷಿತವಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಗಿಸುವ ವ್ಯವಸ್ಥೆಯನ್ನೂ ಸಚಿವರು ಪರಿಶೀಲಿಸಿದರು.
ಒಂದು ಕಾಲದಲ್ಲಿ ಕರ್ನಾಟಕದ ಕಾಡುಗಳಲ್ಲಿ ಕಾಣಿಸಿಕೊಂಡಿದ್ದ ಚಿರತೆಗಳು ಈಗ ಅಳಿದುಹೋಗಿರುವುದರಿಂದ, ಕನಿಷ್ಠ ಮೃಗಾಲಯಗಳಲ್ಲಾದರೂ ಜನತೆಗೆ ಈ ಅಪರೂಪದ ವನ್ಯಜೀವಿಗಳನ್ನು ನೋಡುವ ಅವಕಾಶ ದೊರಕಬೇಕು ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
ಚಿರತೆಗಳ ಸುರಕ್ಷತೆ ಮತ್ತು ಸಂರಕ್ಷಣೆಗೆ ಅತ್ಯಂತ ಆದ್ಯತೆ ನೀಡುವಂತೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa