


ಕೊಪ್ಪಳ, 18 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಕೊಪ್ಪಳ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಯೋಗದಲ್ಲಿ ಡಾ. ರಾಜ್ ಕುಮಾರ ಜನ್ಮ ದಿನಾಚರಣೆಯ ಕಾರ್ಯಕ್ರಮ ರಾಜ್ ಸಂಭ್ರಮವು ಏಪ್ರೀಲ್ 24ರಂದು ಸಂಜೆ 5.30ಕ್ಕೆ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದು, ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳಾದ ಸಿದ್ರಾಮೇಶ್ವರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಡಾ. ರಾಜಕುಮಾರ ಜಯಂತಿ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡದ ಮೇರು ನಟ, ನಟಸಾರ್ವಭೌಮ ಡಾ.ರಾಜ್ ಕುಮಾರ ಅವರು ಈ ನಾಡು ಕಂಡ ನೆಚ್ಚಿನ ನಟರಾಗಿದ್ದಾರೆ. ಗೋಕಾಕ ಚಳವಳಿ ಸೇರಿದಂತೆ ಅನೇಕ ಕನ್ನಡಪರ ಹೋರಾಟಗಳಲ್ಲಿ ಭಾಗಿಯಾಗಿ ನಾಡು-ನುಡಿಗಾಗಿ ಮಹತ್ತರ ಸೇವೆ ಸಲ್ಲಿಸಿದ ಮಹನಿಯರಾಗಿದ್ದಾರೆ. ತಮ್ಮದೇ ಆದ ವಿಶೇಷ ನಟನೆಯಿಂದಾಗಿ ಕನ್ನಡಿಗರ ಮನೆಮಾತಾದ ಡಾ. ರಾಜ್ ಕುಮಾರ ಅವರು ಎಲ್ಲ ಬಗೆಯ ಪಾತ್ರಗಳಲ್ಲಿ ಮನಮಿಡಿಯುವಂತೆ ನಟಿಸಿ ಕಲಾರಾಧಕರ ಹೃದಯಗೆದ್ದಿದ್ದಾರೆ. ಅಂತಹ ಮಹನಿಯರ ಜಯಂತಿ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ಸಹ ವಿಶೇಷವಾಗಿ ನಡೆಯಬೇಕು. ಇದಕ್ಕಾಗಿ ಜವಾಬ್ದಾರಿ ಹಂಚಿಕೆ ಮಾಡಿದಂತೆ ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳು ಸಮನ್ವಯದಿಂದ ಕೆಲಸ ನಿರ್ವಹಿಸಿ, ಡಾ.ರಾಜ್ ಸಂಭ್ರಮ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯುವಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ, ಕನ್ನಡಾಭಿಮಾನಿಗಳ ಸಲಹೆಯಂತೆ ಹಾಗೂ ಸರ್ವ ಸದಸ್ಯರೆಲ್ಲರೂ ಚರ್ಚಿಸಿ ನಿರ್ಣಯಿಸಿದಂತೆ ಡಾ.ರಾಜ್ ಸಂಭ್ರಮ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ ಅವರ ಚಲನಚಿತ್ರ ಗೀತೆಗಳನ್ನು ಹಾಡಲು ಮತ್ತು ಡಾ.ರಾಜ್ ಕುಮಾರ ಅವರ ಸಿನೇಮಾದ ಡೈಲಾಗ್ (ಮಿಮಿಕ್ರಿ) ಹೇಳಲು ಆಸಕ್ತ ಕಲಾವಿದರು ಮತ್ತು ಎಲ್ಲ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ ವ್ಯಾಪಕ ಪ್ರಚಾರ ನಡೆಸಬೇಕು. ಡಾ.ರಾಜ್ ಕುಮಾರ ಅಭಿಮಾನಿಗಳು ಯಾರೇ ಇದ್ದರೂ ವಯಸ್ಸಿನ ಮಿತಿ ಹಾಕದೇ ಎಲ್ಲರಿಗೂ ಅವಕಾಶ ನೀಡಬೇಕು. ಕಾರ್ಯಕ್ರಮದಲ್ಲಿ ಕರೋಕೆ ಹಾಡುಗಾರರಿಗೆ ಆದ್ಯತೆ ನೀಡಿ ಡಾ.ರಾಜ್ ಸಂಭ್ರಮ ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಲು ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಶಿಷ್ಠಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಿ ವಿತರಿಸಬೇಕು. ನಗರಸಭೆ ಅಧಿಕಾರಿಗಳು ಸಾಹಿತ್ಯ ಭವನದಲ್ಲಿ ಕುಡಿಯುವ ನೀರಿನ ಮತ್ತು ಶುಚಿತ್ವದ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮದ ಅವಧಿಯಲ್ಲಿ ನಿರಂತರ ವಿದ್ಯುತ್ ಪೂರೈಸಲು ಜೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆದು ತಿಳಿಸಲು ನಿರ್ದೇಶನ ನೀಡಿದರು. ಕಾರ್ಯಕ್ರಮದಲ್ಲಿ ಹಾಸ್ಟೇಲ್ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಅಗತ್ಯ ಏರ್ಪಾಡು ಮಾಡಲು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕಲಾವಿದರ ಸಮನ್ವಯ ಮಾಡಲು ಸೂಚನೆ ನೀಡಿದರು.
ಬೆಂಗಳೂರಿನ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯರಾದ ಶ್ರೀಮತಿ ಸಾವಿತ್ರಿ ಮುಜಮದಾರ ಅವರು ಮಾತನಾಡಿ, ಈ ಕಾರ್ಯಕ್ರಮಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ, ಬೆಂಗಳೂರು ಇವರ ಸಹಯೋಗ ಪಡೆದುಕೊಳ್ಳಬೇಕು. ಕೊಪ್ಪಳ ಜಿಲ್ಲೆಯಲ್ಲಿ ಡಾ. ರಾಜ್ ಕುಮಾರ ಅಭಿಮಾನಿಗಳ ಪಡೆಯಿದ್ದು ಅವರೆಲ್ಲರೂ ಭಾಗವಹಿಸುತ್ತಾರೆ.
ಡಾ.ರಾಜ್ ಕುಮಾರ ಅಭಿನಯದ ಚಲನಚಿತ್ರಗಳ ಹಾಡುಗಳು ಮತ್ತು ಅವರು ಹಾಡಿರುವ ಗೀತೆಗಳ ಗಾಯನಕ್ಕೆ ಮತ್ತು ಮಿಮಿಕ್ರಿ ಕಾರ್ಯಕ್ರಮಕ್ಕೆ ಅವಕಾಶ ನೀಡಿ ರಾಜ್ ಸಂಭ್ರಮ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಬೇಕು. ಗೋಕಾಕ್ ಚಳುವಳಿ ಸಂದರ್ಭದಲ್ಲಿ ಕೊಪ್ಪಳ ಜಿಲ್ಲೆಗೆ ಆಗಮಿಸಿದ್ದ ಡಾ.ರಾಜ್ ಕುಮಾರ ಅವರೊಂದಿಗೆ ಮುಂಚೂಣಿಯಲ್ಲಿ ಭಾಗವಹಿಸಿದ ಹೋರಾಟಗಾರರು ಕೊಪ್ಪಳ ಜಿಲ್ಲೆಯಲ್ಲಿದ್ದು, ಅವರಿಗೆ ಈ ಕಾರ್ಯಕ್ರಮದಲ್ಲಿ ಸನ್ಮಾನಿಸುವ ವ್ಯವಸ್ಥೆ ಆಗಬೇಕು ಎಂದು ಮನವಿ ಮಾಡಿದರು.
ಕೊಪ್ಪಳ ಜಿಲ್ಲಾ ವಾರ್ತಾಧಿಕಾರಿ ಗವಿಸಿದ್ದಪ್ಪ ಹೊಸಮನಿ ಅವರು, ಡಾ.ರಾಜ್ ಕುಮಾರ ಜನ್ಮ ದಿನಾಚರಣೆ ಕುರಿತಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರು ಕಳುಹಿಸಿದ ಸುತ್ತೋಲೆಯನ್ನು ಸಭೆಗೆ ಓದಿ ಹೇಳಿದರು. ಪ್ರತಿ ವರ್ಷದಂತೆ ಈ ವರ್ಷವು ಸಹ ಜಿಲ್ಲಾಡಳಿತದ ಸಹಯೋಗದಲ್ಲಿ ಡಾ.ರಾಜ್ ಕುಮಾರ ಜನ್ಮ ದಿನಾಚರಣೆಗೆ ಸಿದ್ಧತೆ ಮಾಡಲಾಗುತ್ತಿದೆ.
ಈ ಬಾರಿ ಕೊಪ್ಪಳ ನಗರದ ಪ್ರಸಿದ್ಧ ಅಶೋಕ ವೃತ್ತದಲ್ಲಿನ ಸಾಹಿತ್ಯ ಭವನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಪೂರ್ವಭಾವಿ ಸಿದ್ಧತಾ ಸಭೆಯಲ್ಲಿ ನಿರ್ಣಯಿಸಿದಂತೆ, ಡಾ.ರಾಜ್ ಕುಮಾರ ಸಿನೇಮಾ ಗೀತೆಗಳ ಗಾಯನ ಮತ್ತು ಡಾ.ರಾಜ್ ಮಿಮಿಕ್ರಿಗೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸುವ ಬಗ್ಗೆ ವ್ಯಾಪಕ ಪ್ರಚಾರ ನೀಡಲಾಗುವುದು. ವಿದ್ಯಾರ್ಥಿಗಳು, ಯುವಜನರು, ನೌಕರರು, ಅಧಿಕಾರಿಗಳು, ಕಲಾವಿದರು, ಮಹಿಳೆಯರು ಯಾರೇ ಇರಲಿ ಹೆಸರು ನೋಂದಾಯಿಸುವ ಪ್ರತಿಯೊಬ್ಬರಿಗೂ ನಿಯಮಾನುಸಾರ ಅವಕಾಶಕ್ಕೆ ಏರ್ಪಾಡು ಮಾಡಲಾಗುವುದು. ಬೇರೆ ಬೇರೆ ಇಲಾಖೆಗಳ ಅಧಿಕಾರಿಗಳ ಸಮನ್ವಯದೊಂದಿಗೆ ಕಾರ್ಯಕ್ರಮದ ಸಿದ್ಧತೆ ನಡೆಸಲಾಗುವುದು ಎಂದು ತಿಳಿಸಿದರು.
ಕನ್ನಡ ಪರ ಹೋರಾಟಗಾರರಾದ ಮಹಾಂತೇಶ ಕೊತಬಾಳ ಅವರು ಮಾತನಾಡಿ, ಕೊಪ್ಪಳ ಜಿಲ್ಲೆಯಲ್ಲಿ ಡಾ.ರಾಜ್ ಕುಮಾರ ಅಭಿಮಾನಿಗಳ ಸಂಖ್ಯೆ ದೊಡ್ಡದಿದೆ. ಈ ಕಾರ್ಯಕ್ರಮದಲ್ಲಿ ಡಾ.ರಾಜ್ ಕುಮಾರ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಎಸ್.ಆರ್ ಪೂಜಾರ್, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಜಗದೀಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಲೆಕ್ಕ ಅಧಿಕ್ಷಕರಾದ ಎ.ಆಂಜನೇಯ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕಾರದ ಉಷಾ ಮುಜುಮ್ದಾರ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಗಳಾದ ಎ.ಬಸವರಾಜ, ಸಹಾಯಕ ಕೃಷಿ ನಿರ್ದೇಶಕರಾದ ರೇವಣಪ್ಪ ಮನಗೂಳಿ, ವಾರ್ತಾ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್