
ಚಿತ್ರದುರ್ಗ, 17 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಯುವಜನತೆ ತಂಬಾಕಿನ ದುಶ್ಚಟಗಳಿಗೆ ಬಲಿಯಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ನಗರ ಪ್ರದೇಶದ ಬಾರ್ ಮತ್ತು ರೆಸ್ಟೋರೆಂಟ್ ಹಾಗೂ ತಂಬಾಕು ಉತ್ಪನ್ನ ಮಾರಾಟಗಾರರ ಅಂಗಡಿಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವತಿಯಿಂದ ಸೋಮವಾರ ದಿಢೀರ್ ದಾಳಿ ನಡೆಸಿ ಜಾಗೃತಿ ಮೂಡಿಸಲಾಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಜಿ.ಪಿ. ರೇಣುಪ್ರಸಾದ್ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿ ಡಾ. ರೇಖಾ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಇಲಾಖೆ, ಪುರಸಭೆ ಹಾಗೂ ಪೋಲೀಸ್ ಇಲಾಖೆಯ ಜಂಟಿ ತಂಡವು ಹೊಳಲ್ಕೆರೆ ನಗರದ ವಿವಿಧೆಡೆ ತಪಾಸಣೆ ನಡೆಸಿತು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಹಾಗೂ ಪಾನ್ ಮಸಾಲ ಜಗಿದು ಉಗಿಯುವುದರಿಂದ ಆಗುವ ಆರೋಗ್ಯ ಹಾನಿಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದ ಅಧಿಕಾರಿಗಳು, ನಿಯಮದಂತೆ ಸೆಕ್ಷನ್ 4, 6ಎ ಮತ್ತು 6ಬಿ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಅಂಗಡಿ ಮಾಲೀಕರಿಗೆ ಸೂಚನೆ ನೀಡಿದರು.
ಕೋಟ್ಪಾ-2003ರ ಕಾಯ್ದೆಯಡಿ ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡ ತಂಡವು, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡಿದ (ಸೆಕ್ಷನ್-4) 14 ಪ್ರಕರಣಗಳನ್ನು ದಾಖಲಿಸಿ 1550 ರೂ. ದಂಡ ಹಾಗೂ ಅಪ್ರಾಪ್ತರಿಗೆ ತಂಬಾಕು ಮಾರಾಟ ಮಾಡಿದ (ಸೆಕ್ಷನ್-6ಎ) 5 ಪ್ರಕರಣಗಳನ್ನು ದಾಖಲಿಸಿ 550 ರೂ. ಸೇರಿದಂತೆ ಒಟ್ಟು 2100 ರೂ. ದಂಡ ವಸೂಲಿ ಮಾಡಿದೆ.
ಈ ದಾಳಿಯಲ್ಲಿ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ. ಪ್ರಭುದೇವ, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಕೆ.ರಂಗನಾಥ, ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಟಿ.ಕಲ್ಪನಾ, ಮಹಿಳಾ ಹೆಡ್ ಕಾನ್ಸ್ಟೇಬಲ್ ಪುಷ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa