


ಕೊಪ್ಪಳ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಲ್ಯವಿವಾಹ ಎನ್ನುವುದು ಸಮಾಜಕ್ಕೆ ಅಂಟಿದ ಶಾಪವಾಗಿದ್ದು, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಿ ಕೊಪ್ಪಳವನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಕೈಜೋಡಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಮಹಾಂತೇಶ ದರಗದ ಅವರು ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ರೀಡ್ಸ್ ಸಂಸ್ಥೆ ಬಳ್ಳಾರಿ ಇವರುಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ನಗರದ ತಹಶೀಲ್ದಾರರ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016ರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಯಿ ಮರಣ, ಶಿಶು ಮರಣ, ಅಪೌಷ್ಠಿಕ ಮಕ್ಕಳ ಜನನ ನಿರ್ಮೂಲನೆಗಾಗಿ ಸರಕಾರವು ಬಾಲ್ಯವಿವಾಹ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದೆ. ಅದರನ್ವಯ 18 ವರ್ಷದೊಳಗಿನ ಹೆಣ್ಣು ಮಗುವಿಗೆ ಮತ್ತು 21 ವರ್ಷದೊಳಗಿನ ಗಂಡು ಮಗುವಿಗೆ ವಿವಾಹ ಮಾಡುವುದನ್ನು ನಿಷೇಧಿಸಿದೆ. ರಾಜ್ಯವನ್ನು ಬಾಲ್ಯವಿವಾಹ ಮುಕ್ತ ರಾಜ್ಯವನ್ನಾಗಿಸಲು ಕರ್ನಾಟಕ ರಾಜ್ಯ ಸರಕಾರವು ಕರ್ನಾಟಕ ತಿದ್ದುಪಡಿಯನ್ನು ತಂದಿದ್ದು, ರಾಷ್ಟ್ರಪತಿಗಳ ಅನುಮೋದನೆಯೊಂದಿಗೆ 2018 ಮಾರ್ಚ್ 03ರಿಂದ ಜಾರಿಯಲ್ಲಿರುತ್ತದೆ. ಅದರನ್ವಯ ರಾಜ್ಯದಲ್ಲಿ ಬಾಲ್ಯವಿವಾಹಗಳು ಅಸಿಂಧು ವಿವಾಹಗಳಾಗಿವೆ. ಬಾಲ್ಯವಿವಾಹವನ್ನು ಮಾಡುವವರು, ಭಾಗವಹಿಸುವವರು. ಆಯೋಜಿಸುವವರು ಎಲ್ಲರಿಗೂ ಕನಿಷ್ಠ 1 ವರ್ಷದಿಂದ 2 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ಜಿಲ್ಲೆಯಲ್ಲಿ ಪಾದ್ರಿಯೊಬ್ಬರಿಗೆ, ಗ್ರಾಮ ಪಂಚಾಯತ್ ಅಧ್ಯಕ್ಷರೊಬ್ಬರಿಗೆ ಜೈಲು ಶಿಕ್ಷೆಯನ್ನನು ವಿಧಿಸಿದ ಪ್ರಕರಣಗಳು ವರದಿಯಾಗಿವೆ. ಆದ್ದರಿಂದ ಬಾಲ್ಯವಿವಾಹಗಳನ್ನು ಮಾಡಬೇಡಿ, ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರೂ ಸಹಕರಿಸಿ ಎಂದು ತಿಳಿಸಿದರು.
ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಸಿಂಧು ಅಂಗಡಿ ಅವರು ಮಾತನಾಡಿ, ಮಾನ್ಯ ಉಚ್ಚ ನ್ಯಾಯಾಲಯ, ಕರ್ನಾಟಕವು, ವಿವಾಹಗಳು ನಡೆಯುವ, ಆಯೋಜಿಸುವ ಸ್ಥಳಗಳಲ್ಲಿ ಕಡ್ಡಾಯವಾಗಿ ಬಾಲ್ಯವಿವಾಹ ನಿಷೇಧದ ಕುರಿತು ಶಾಶ್ವತ ಗೋಡೆ ಬರಹವನ್ನು ಬರೆಯಿಸಲು ಆದೇಶಿಸಿದೆ. ಮಾನ್ಯ ಜಿಲ್ಲಾಧಿಕಾರಿಗಳು ಈಗಾಗಲೇ ಗೋಡೆ ಬರಹಗಳನ್ನು ಬರೆಯಿಸಲು ಆದೇಶಿಸಿದ್ದು, ತಾವುಗಳೆಲ್ಲರೂ ವಿವಾಹವನ್ನು ಆಯೋಜಿಸುವ ಸ್ಥಳದಲ್ಲಿ ಕಡ್ಡಾಯವಾಗಿ ಶಾಶ್ವತ ಗೋಡೆ ಬರಹಗಳನ್ನು ಬರೆಯಿಸುವಂತೆ ಹಾಗೂ ಅಯೋಜಿಸುವ ವಿವಾಹಗಳಲ್ಲಿ, ಬಾಲ್ಯವಿವಾಹ ನಡೆಯದಂತೆ ಸೂಕ್ತ ಕ್ರಮವಹಿಸಿ, ಮುದ್ರಕರುಗಳು ವಿವಾಹ ಆಮಂತ್ರಣ ಪತ್ರಿಕೆಯನ್ನು ಮುದ್ರಿಸುವ ಪೂರ್ವದಲ್ಲಿಯೇ ವಧು-ವರರ” ವಯಸ್ಸನ್ನು ಕಡ್ಡಾಯವಾಗಿ ಖಾತ್ರಿಪಡಿಸಿಕೊಂಡು ಮುದ್ರಿಸುವಂತೆ ತಿಳಿಸುತ್ತಾ ಜಿಲ್ಲೆಯನ್ನು ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿಸಲು ಜಿಲ್ಲಾಡಳಿತವು ವಿನೂತನವಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಯಲ್ಲಿ ತಂದಿದೆ ಎಂದು ಹೇಳಿದರು.
ಕೊಪ್ಪಳ ಗ್ರೇಡ್-2 ತಹಶೀಲ್ದಾರರಾದ ಗವಿಸಿದ್ದಪ್ಪ ಮಣ್ಣೂರ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಕೊಪ್ಪಳ ಅಧ್ಯಕ್ಷರಾದ ಪ್ರಕಾಶ ಕಡಗದ, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶರಣಪ್ಪ ಸೇರಿದಂತೆ ಕೊಪ್ಪಳ ತಾಲೂಕಿನ ಸಮೂಹಿಕ ವಿವಾಹ ಆಯೋಜಕರು, ಪ್ರಿಟಿಂಗ್ ಪ್ರೆಸ್ ಮಾಲೀಕರುಗಳು ಉಪಸ್ಥಿತರಿದ್ದರು.
ಪ್ರತಿಭಾ ಕಾಶೀಮಠ ಬಾಲ್ಯವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016ರ ಕುರಿತು ಮಾಹಿತಿಯನ್ನು ನೀಡಿದರು.
ರೀಡ್ಸ್ ಬಳ್ಳಾರಿ ಸಂಯೋಜಕ ತಿಪ್ಪೇಶಪ್ಪ ಅವರು ಪ್ರಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ಹಿರೇ ತೆಮ್ಮಿನಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್