ಕೆಐಡಿಬಿ 17 ಕೋಟಿ ವಂಚನೆ : ಆರೋಪಿ ಪೊಲೀಸ್ ವಶಕ್ಕೆ
ಬಳ್ಳಾರಿ, 15 ಏಪ್ರಿಲ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಳ್ಳಾರಿ ವಲಯ ಕಚೇರಿಯಲ್ಲಿ ಲಿಟರೇಟ್ ಅಸಿಸ್ಟೆಂಟ್ ಆಗಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ ಯುವಕ ಮೂವರು ಎಕ್ಸಿಕ್ಯೂಟಿವ್ ಇಂಜಿನಿಯರುಗಳ ಅಧಿಕಾರವಧಿಯಲ್ಲಿ 16 ಕೋಟಿ 17 ಲಕ್ಷದ 98 ಸಾವಿರದ 916 ರೂ
ಕೆಐಡಿಬಿ 17 ಕೋಟಿ ವಂಚನೆ : ಆರೋಪಿ ಪೊಲೀಸ್ ವಶಕ್ಕೆ


ಬಳ್ಳಾರಿ, 15 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಳ್ಳಾರಿ ವಲಯ ಕಚೇರಿಯಲ್ಲಿ ಲಿಟರೇಟ್ ಅಸಿಸ್ಟೆಂಟ್ ಆಗಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿದ್ದ ಯುವಕ ಮೂವರು ಎಕ್ಸಿಕ್ಯೂಟಿವ್ ಇಂಜಿನಿಯರುಗಳ ಅಧಿಕಾರವಧಿಯಲ್ಲಿ 16 ಕೋಟಿ 17 ಲಕ್ಷದ 98 ಸಾವಿರದ 916 ರೂಪಾಯಿ ಮೊತ್ತದ ವಂಚನೆ ಮಾಡಿದ್ದ ಆರೋಪಿ ಹೆಚ್.ವಿ. ಸಂತೋಷ್ ಕುಮಾರ್ ನನ್ನು (33) ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸಿದ್ದಾರೆ.

ಆರೋಪಿ ಸಂತೋಷ್ ಕುಮಾರ್ ಅವ್ಯವಹಾರವನ್ನು ಗಮನಿಸಿದ್ದ ಹಿರಿಯ ಅಧಿಕಾರಿಗಳು ಆಂತರಿಕ ತನಿಖೆಯನ್ನು ಪ್ರಾರಂಭಿಸಿ, ಆತನನ್ನು ಕೆಲಸದಿಂದ ವಜಾಗೊಳಿಸಿದ್ದರು. ಆರೋಪಿಯು ಕೆಆರ್ಎಸ್ ಪಕ್ಷವನ್ನು ಸೇರಿಕೊಂಡು `ಭ್ರಷ್ಟಾಚಾರ ಮುಕ್ತ' ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಳ್ಳಾರಿ ವಲಯ ಕಛೇರಿಯ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತ, ಮಾಧ್ಯಮಗಳ ಸಂಪರ್ಕದಿಂದ ಕಚೇರಿಯ ವಿರುದ್ಧ ದೊಡ್ಡ ದೊಡ್ಡ ಸುದ್ದಿಗಳನ್ನು ಮಾಡಿಸುತ್ತಿದ್ದರು.

ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಳ್ಳಾರಿ ವಲಯ ಕಚೇರಿಯ ಅಧಿಕಾರಿಗಳು ನಡೆಸಿದ್ದ ಆಂತರಿಕ ತನಿಖೆಯಲ್ಲಿ ಆರೋಪಿ ಸಂತೋಷ್ ಕುಮಾರ್ ವಿರುದ್ಧ ಕೋಟ್ಯಾಂತರ ರುಪಾಯಿ ಅವ್ಯವಹಾರದಲ್ಲಿ ಚೆಕ್ಗಳ ಮೂಲಕ - ವಿವಿಧ ಖಾತೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ಖಚಿತಪಡಿಸಿಕೊಂಡು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಿನಾಂಕ 19.03.2026 ರಂದು ಸೆಕ್ಷನ್ 316(2),316(4),316(5),318(4),336(2),336(3),340(2),3(5)ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಪ್ರಕರಣದಲ್ಲಿ ಕೋಟ್ಯಾಂತರ ರೂಪಾಯಿಗಳ ಅವ್ಯವಹಾರ ಇದ್ದ ಕಾರಣ ಜಿಲ್ಲಾ ಪೊಲೀಸ್ ಪ್ರಕರಣದ ತನಿಖೆಯನ್ನು ಸಿಓಡಿಗೆ ನೀಡಿದ್ದು, ಪ್ರಕರಣದ ಎಲ್ಲಾ ದಾಖಲೆಗಳನ್ನು ಸಿಓಡಿ ಅಧಿಕಾರಿಗಳು ವಶಕ್ಕೆ ಪಡೆದು, ತನಿಖೆಯನ್ನು ಕ್ಷಿಪ್ರಗತಿಯಲ್ಲಿ ನಡೆಸಿದ್ದರು. ಪ್ರಕರಣ ದಾಖಲಾದ ನಂತರ ಆರೋಪಿಯು ತಲೆಮರೆಸಿಕೊಂಡಿದ್ದನು. ಆರೋಪಿಯು ಮಂಗಳವಾರ ಬಳ್ಳಾರಿಯ ಕೌಲ್ಬಜಾರ್ಗೆ ಬಂದು, ರಾತ್ರಿ ವೇಳೆಯಲ್ಲಿ ಆತನ ಮನೆಯಲ್ಲಿ ತಂಗಿದ್ದನು. ಆರೋಪಿಯು ಮನೆಗೆ ಬಂದಿರುವುದನ್ನು ಖಚಿತಪಡಿಸಿಕೊಂಡ ಪೊಲೀಸರು ತಕ್ಷಣವೇ ಮನೆಗೆ ಭೇಟಿ ನೀಡಿ ಆರೋಪಿಯನ್ನು ವಶಕ್ಕೆ ಪಡೆದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಈ ವಂಚನೆ ಪ್ರಕರಣದಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಬಳ್ಳಾರಿ ವಲಯ ಕಚೇರಿಯ ಒಬ್ಬ ಖಾಯಂ ನೌಕರ ಹಾಗೂ ಬ್ಯಾಂಕ್ ಸಿಬ್ಬಂದಿ ಪಾಲ್ಗೊಂಡು ನಕಲಿ ಸಹಿಗಳನ್ನು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿದೆ. ಆರೋಪಿಯು ಪತ್ನಿಯ ಖಾತೆಗೆ, ಪತ್ನಿಯ ಸಹೋದರರ ಖಾತೆಗಳಿಗೆ ಹಣ ವರ್ಗಾವಣೆ ಮಾಡಿ, ಕೋಟ್ಯಾಂತರ ರುಪಾಯಿ ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾನೆ. ಅಲ್ಲದೇ, 19 ಕ್ಕೂ ಹೆಚ್ಚಿನ ವಾಹಗಳನ್ನು ವೇರೆಯವರ ಹೆಸರಲ್ಲಿ ಖರೀದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಎಪಿಎಂಸಿ ಪೊಲೀಸ್ ಠಾಣೆಯ ಪಿಐ ಮಹಮ್ಮದ್ ರಫಿ, ಎಎಸ್ಐಗಳಾದ ಡಿ. ಕೃಷ್ಣ,

ಆನಂದರೆಡ್ಡಿ ಹಾಗೂ ಪೇದೆಗಳಾದ ಹದ್ದಿಗೇರಿ ಗೋರೆಂಟಿ, ಬಸವರಾಜ, ಕುರುಬರ ಕೋನಪ್ಪ, ದೀಪೇಂದ್ರ ಪಾಟೀಲ್, ಮಹೇಶ್ವರ ಗೌಡ ಅವರ ತಂಡವು ಶ್ರಮಿಸಿ, ಯಶಸ್ವಿಯಾಗಿದೆ.

ಆರೋಪಿಯು ವಿವಿಧ ಬ್ಯಾಂಕ್ಗಳಲ್ಲಿ (05 ಖಾತೆಗಳು) ಖಾತೆಗಳನ್ನು ಹೊಂದಿದ್ದನು. ಅಲ್ಲದೇ, ಪತ್ನಿ ಶೃತಿ ಹೆಸರಿನ ಒಂದು ಖಾತೆಗಳಿಗೆ 7 ಕೋಟಿ ರುಪಾಯಿಗಳನ್ನು ವರ್ಗಾವಣೆ ಮಾಡಿದ್ದಾನೆ. ಪತ್ನಿಯ ಸಹೋದರರ ಹೆಸರಲ್ಲಿ ವಾಹನಗಳನ್ನು ಖರೀದಿಸಿದ್ದಾನೆ. ತಿಲಕ್ ನಗರದಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಮನೆಯನ್ನು ನಿರ್ಮಿಸುತ್ತಿದ್ದಾನೆ. ಅಲ್ಲದೇ, ಈತನ ವಿವಿಧ ಖಾತೆಗಳಲ್ಲಿದ್ದ 60 ಲಕ್ಷ ರೂಪಾಯಿಗೂ ಹೆಚ್ಚಿನ ಪ್ರಮಾಣ ನಗದು ಹಣವನ್ನು ಸೀಜ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande