
ಚಿತ್ರದುರ್ಗ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಗಂಡು-ಹೆಣ್ಣು ಎಂಬ ಭೇದವಿಲ್ಲದೆ 18 ರಿಂದ 65 ವರ್ಷದೊಳಗಿನ ಆರೋಗ್ಯವಂತರು ನೇತ್ರದಾನ ಮಾಡಬಹುದು. ಒಬ್ಬ ವ್ಯಕ್ತಿ ನೇತ್ರದಾನ ಮಾಡುವುದರಿಂದ ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದಂತಾಗುತ್ತದೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ. ಗಿರೀಶ್ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕಿನ ಕಾಸವರಹಟ್ಟಿ ಪಿ.ಎಚ್.ಸಿ ವ್ಯಾಪ್ತಿಯ ದ್ಯಾಮವ್ವನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಬುಧವಾರ ಜಿಲ್ಲಾ ಆಸ್ಪತ್ರೆ, ಆರೋಗ್ಯ ಇಲಾಖೆ ಹಾಗೂ ಡಾನ್ ಬಾಸ್ಕೋ ಸಂಸ್ಥೆಯ ಎನ್.ಎಸ್.ಎಸ್ ಘಟಕದ ವತಿಯಿಂದ ಆಯೋಜಿಸಿದ್ದ ಉಚಿತ ನೇತ್ರ ತಪಾಸಣೆ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನೇತ್ರದಾನವು ಅತ್ಯಂತ ಶ್ರೇಷ್ಠ ದಾನವಾಗಿದ್ದು, ಒಬ್ಬರ ನೇತ್ರದಾನವು ಮತ್ತಿಬ್ಬರ ಬಾಳಿಗೆ ಬೆಳಕಾಗುತ್ತದೆ. ಹಾಗೆಯೇ ಅಪಘಾತ ಹಾಗೂ ರಕ್ತಹೀನತೆ ಇರುವ ತಾಯಂದಿರಿಗೆ ತುರ್ತು ಸಂದರ್ಭದಲ್ಲಿ ನಾವು ನೀಡುವ ರಕ್ತವು ಜೀವ ಉಳಿಸಲು ನೆರವಾಗುತ್ತದೆ ಎಂದರು.
ಜಿಲ್ಲಾ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ರೂಪಾ ಮಾತನಾಡಿ, ಮನಸ್ಸಿದ್ದಲ್ಲಿ ಮಾರ್ಗವಿದೆ. ಇಂದಿನ ಒತ್ತಡದ ಜೀವನ ಶೈಲಿ, ಜಂಕ್ ಫುಡ್ ಸೇವನೆ ಹಾಗೂ ಮಾದಕ ವಸ್ತುಗಳ ಬಳಕೆಯಿಂದ ಪೋಷಕಾಂಶಗಳ ಕೊರತೆಯಾಗಿ ರಕ್ತಹೀನತೆ ಉಂಟಾಗುತ್ತಿದೆ. ಪೋಷಕಾಂಶಯುಕ್ತ ಸಮತೋಲಿತ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು. ಅರ್ಹರು ಯಾವುದೇ ಆತಂಕವಿಲ್ಲದೆ ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಎನ್.ಎಸ್.ಎಸ್ ನೋಡಲ್ ಅಧಿಕಾರಿ ಧನಕೋಟಿ, ಡಾನ್ ಬಾಸ್ಕೋ ಸಂಸ್ಥೆಯ ಪ್ರಾಧ್ಯಾಪಕರಾದ ಸಾನಿಯಾ, ನಿಮಿಷಾಂಬ, ಗಂಗಾಧರರೆಡ್ಡಿ, ಪ್ರವೀಣ್ ಕುಮಾರ್, ಮಹೇಂದ್ರ, ಪಿಡಿಒ ರಾಜೇಶ್ವರಿ, ನೇತ್ರಾಧಿಕಾರಿ ಕೆ.ಸಿ. ರಾಮು ಸೇರಿದಂತೆ ಆಶಾ ಕಾರ್ಯಕರ್ತೆಯರು ಮತ್ತು ಎನ್.ಎಸ್.ಎಸ್ ಶಿಬಿರಾರ್ಥಿಗಳು ಹಾಜರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa