
ಬೆಂಗಳೂರು, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ವಿಶ್ವ ಕ್ವಾಂಟಮ್ ದಿನಾಚರಣೆಯ ಅಂಗವಾಗಿ ಕರ್ನಾಟಕ ಸರ್ಕಾರ ದೇಶದ ಮೊದಲ ಸಮಗ್ರ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನ್ನು ಅನಾವರಣಗೊಳಿಸಿದ್ದು, ಕ್ವಾಂಟಮ್ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ.
ಜವಾಹರಲಾಲ್ ನೆಹರು ತಾರಾಲಯದ ಆವರಣದಲ್ಲಿರುವ ಯು.ಆರ್. ರಾವ್ ಭವನದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ‘ದೃಷ್ಟಿಕೋನದಿಂದ ವಾಸ್ತವದತ್ತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಭೋಸರಾಜು, ಕರ್ನಾಟಕವು ಕ್ವಾಂಟಮ್ ನಾವೀನ್ಯತೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿದ್ದು, ಜಾಗತಿಕ ಕೇಂದ್ರವಾಗಿ ರೂಪುಗೊಳ್ಳುತ್ತಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲಿ ಮೊದಲ ಹಂತದ ಕ್ವಾಂಟಮ್ ಮಾರ್ಗಸೂಚಿ ಅನುಷ್ಠಾನಕ್ಕೆ ಚಾಲನೆ ನೀಡಲಾಗಿದ್ದು, ಅದರ ಭಾಗವಾಗಿ ಸಮಗ್ರ ಕ್ವಾಂಟಮ್ ಎಕೋ ಸಿಸ್ಟಮ್ ಮ್ಯಾಪ್ ಅನ್ನು ಅನಾವರಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕರ್ನಾಟಕವು ದೇಶದಲ್ಲೇ ಅತ್ಯುತ್ತಮ ಕ್ವಾಂಟಮ್ ಪರಿಸರ ವ್ಯವಸ್ಥೆಯನ್ನು ಹೊಂದಿದ್ದು, ಈ ಮ್ಯಾಪ್ ಮೂಲಕ ರಾಜ್ಯದ ಸಾಧನೆಗಳನ್ನು ವಿಶ್ವದ ಮುಂದೆ ಪ್ರದರ್ಶಿಸಲಾಗುತ್ತಿದೆ ಎಂದು ಹೇಳಿದರು.
ಕ್ವಾಂಟಮ್ ಅಭಿವೃದ್ಧಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕ್ಯೂ ಸಿಟಿ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು. ಶಿಕ್ಷಣ ಸಂಸ್ಥೆಗಳು, ಸ್ಟಾರ್ಟ್ಅಪ್ಗಳು ಮತ್ತು ಕೈಗಾರಿಕೆಗಳನ್ನು ಒಂದೇ ವೇದಿಕೆಯಡಿ ತರಲು ಉದ್ದೇಶಿಸಿರುವ ಈ ಯೋಜನೆ, ಸಂಶೋಧನೆಯನ್ನು ನೈಜ ಅನ್ವಯಿಕತೆಗೆ ಕೊಂಡೊಯ್ಯಲಿದೆ. ‘ಏಕ-ಗವಾಕ್ಷಿ ಕ್ವಾಂಟಮ್ ಪರಿಸರ ವ್ಯವಸ್ಥೆ’ ರೂಪದಲ್ಲಿ ವಿನ್ಯಾಸಗೊಳ್ಳಲಿರುವ ಈ ಯೋಜನೆಯ ವಿಸ್ತೃತ ವರದಿ ಶೀಘ್ರದಲ್ಲೇ ಸಿದ್ಧವಾಗಲಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಕ್ವಾಂಟಮ್ ಕ್ಷೇತ್ರಕ್ಕೆ ಅಗತ್ಯವಿರುವ ನುರಿತ ಮಾನವ ಸಂಪನ್ಮೂಲ ಈಗಾಗಲೇ ಲಭ್ಯವಿದ್ದು, ಈ ಕ್ಷೇತ್ರದಲ್ಲಿ ಕೌಶಲ್ಯಾಭಿವೃದ್ಧಿ, ಸಂಶೋಧನೆ ಮತ್ತು ಸ್ಟಾರ್ಟ್ಅಪ್ಗಳಿಗೆ ಉತ್ತೇಜನ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ₹10 ಕೋಟಿ ಅನುದಾನ ಘೋಷಿಸಿದ್ದಾರೆ ಎಂದು ಸಚಿವರು ತಿಳಿಸಿದರು.
ಇದೇ ವೇಳೆ ಕರ್ನಾಟಕ ಕ್ವಾಂಟಮ್ ಟಾಸ್ಕ್ ಫೋರ್ಸ್ ಅಧ್ಯಕ್ಷರಾಗಿ ಅರಿಂದಮ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ ಎಂದು ಘೋಷಿಸಲಾಯಿತು. ಅವರ ನೇತೃತ್ವದಲ್ಲಿ ರಾಜ್ಯದ ಕ್ವಾಂಟಮ್ ಕ್ಷೇತ್ರ ಇನ್ನಷ್ಟು ವೇಗವಾಗಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಮುಂದಿನ ದಶಕವನ್ನು “ಡೀಪ್ ಟೆಕ್ ದಶಕ” ಎಂದು ಘೋಷಿಸಿರುವುದಾಗಿ ತಿಳಿಸಿದರು. ಈ ಕ್ಷೇತ್ರಕ್ಕೆ ಬೆಂಬಲವಾಗಿ ₹400 ಕೋಟಿ ಮೀಸಲು ನಿಧಿ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ 1,300ಕ್ಕೂ ಹೆಚ್ಚು ಸ್ಟಾರ್ಟ್ಅಪ್ಗಳಿಗೆ ಷೇರು ಪಾಲುದಾರಿಕೆ ಇಲ್ಲದೆ ₹50 ಲಕ್ಷವರೆಗೆ ಅನುದಾನ ನೀಡಲಾಗುತ್ತಿದ್ದು, ಒಂದೇ ದಿನದಲ್ಲಿ ದಾಖಲೆಯ ₹732 ಕೋಟಿ ಹೂಡಿಕೆಯನ್ನು ವಿತರಿಸಲಾಗಿದೆ ಎಂದು ಅವರು ತಿಳಿಸಿದರು. ಕರ್ನಾಟಕ ಈಗಾಗಲೇ ಉತ್ತಮ ಕ್ವಾಂಟಮ್ ಪರಿಸರವನ್ನು ಹೊಂದಿದ್ದು, ಈ ಕ್ಷೇತ್ರದಲ್ಲಿ ರಾಜ್ಯವು ಪ್ರಮುಖ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa