
ಮಂಡ್ಯ, 15 ಏಪ್ರಿಲ್ (ಹಿ.ಸ.) :
ಆ್ಯಂಕರ್ : ತ್ರಿವಿಧ ದಾಸೋಹದ ಮೂಲಕ ದೇಶಾದ್ಯಂತ ಹೆಸರಾಗಿರುವ ಆದಿಚುಂಚನಗಿರಿ ಮಠ ತನ್ನ ಸೇವಾ ಪರಂಪರೆಯಿಂದ ಜನಮನ ಗೆದ್ದಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.
ನರೇಂದ್ರ ಮೋದಿ ಅವರು ಆದಿಚುಂಚನಗಿರಿಯಲ್ಲಿರುವ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಿರುವುದು ಅಪಾರ ಸಂತಸ ತಂದಿದೆ ಎಂದು ಅವರು ತಿಳಿಸಿದರು.
ಭೈರವೈಕ್ಯ ಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುಮಾರಸ್ವಾಮಿ, “ಸಣ್ಣ ಮಠವೊಂದನ್ನು ದೊಡ್ಡ ವೃಕ್ಷವನ್ನಾಗಿ ಬೆಳೆಸಿದ್ದು ಬಾಲಗಂಗಾಧರನಾಥ ಸ್ವಾಮೀಜಿ. ರೈತರ ಮಕ್ಕಳಿಗೆ ವಿದ್ಯಾಭ್ಯಾಸದ ಅವಕಾಶ ಕಲ್ಪಿಸುವಲ್ಲಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ಜೋಳಿಗೆಯನ್ನು ಹಿಡಿದು ಮಠ ಕಟ್ಟಿದ ಮಹಾನ್ ವ್ಯಕ್ತಿತ್ವ ಅವರದು,” ಎಂದು ಸ್ಮರಿಸಿದರು.
ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಆದಿಚುಂಚನಗಿರಿ ಮಠ ಸಾಧಿಸಿರುವ ಪ್ರಗತಿ ಅಪಾರವಾಗಿದೆ. ದೇಶದಾದ್ಯಂತ ಈ ಮಠಕ್ಕೆ ವಿಶಿಷ್ಟ ಗೌರವವಿದ್ದು, ಬಡ ಮಕ್ಕಳಿಗೆ ವಿದ್ಯಾದಾನ ಮಾಡಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ಮಲಾನಂದನಾಥ ಸ್ವಾಮೀಜಿ, “ಸುಮಾರು 1800 ವರ್ಷಗಳ ಇತಿಹಾಸ ಹೊಂದಿರುವ ಚುಂಚನಗಿರಿ ಮಠದ 71ನೇ ಪೀಠಾಧಿಪತಿಗಳಾಗಿದ್ದ ಬಾಲಗಂಗಾಧರನಾಥ ಶ್ರೀಗಳ ಗುರು ಭೈರವೈಕ್ಯ ಮಂದಿರವನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಆಗಮಿಸಿರುವುದು ವಿಶೇಷ ಕ್ಷಣವಾಗಿದೆ,” ಎಂದರು.
ಮಣ್ಣಿನ ಮಗ, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಮತ್ತಷ್ಟು ಗೌರವ ತಂದಿದೆ ಎಂದು ಹೇಳಿದರು. ಚುಂಚನಗಿರಿ ಮಠ ಆಧ್ಯಾತ್ಮಿಕ ಶಕ್ತಿಯ ಕೇಂದ್ರವಾಗಿದ್ದು, ಕೋಟ್ಯಂತರ ಭಕ್ತರ ಕನಸು ಇಂದು ನನಸಾಗಿದೆ ಎಂದು ಅಭಿಪ್ರಾಯಪಟ್ಟರು.
2022ರಲ್ಲಿ ಬೆಂಗಳೂರಿನಲ್ಲಿ ಕೆಂಪೇಗೌಡ ಅವರ ಪ್ರತಿಮೆ ಉದ್ಘಾಟನೆಗೆ ಮೋದಿ ಆಗಮಿಸಿದ್ದನ್ನು ಸ್ಮರಿಸಿದ ನಿರ್ಮಲಾನಂದನಾಥ ಶ್ರೀಗಳು, “ಕೆಂಪೇಗೌಡರ ಆಲೋಚನೆಗಳನ್ನು ಸರ್ಕಾರಗಳು ಅಳವಡಿಸಿಕೊಳ್ಳಬೇಕು ಎಂದು ಮೋದಿ ಆಗ ಹೇಳಿದ್ದರು. ಈಗ ದೇಶದ ಅಭಿವೃದ್ಧಿಗೆ ಅವರು ಸಮರ್ಪಿತರಾಗಿ ಶ್ರಮಿಸುತ್ತಿದ್ದಾರೆ,” ಎಂದು ಹೇಳಿದರು.
ಸ್ಟಾರ್ಟಪ್ ಕ್ಷೇತ್ರದಲ್ಲಿ ದೇಶ ಸಾಧಿಸಿರುವ ಪ್ರಗತಿಯನ್ನು ಉಲ್ಲೇಖಿಸಿದ ಅವರು, “ಒಮ್ಮೆ ಕೇವಲ 400 ಸ್ಟಾರ್ಟಪ್ಗಳು ಇದ್ದ ದೇಶದಲ್ಲಿ ಈಗ 2 ಲಕ್ಷಕ್ಕೂ ಹೆಚ್ಚು ಸ್ಟಾರ್ಟಪ್ಗಳು ಬೆಳೆಯುತ್ತಿರುವುದು ಮೋದಿ ನೇತೃತ್ವದ ಅಭಿವೃದ್ಧಿಯ ಸಂಕೇತ,” ಎಂದರು.
ಬಾಲಗಂಗಾಧರನಾಥ ಶ್ರೀಗಳ ತ್ರಿವಿಧ ದಾಸೋಹ, ಶಿಕ್ಷಣ ಮತ್ತು ಸಮಾಜ ಸೇವೆಯ ಪರಂಪರೆ ಇಂದಿಗೂ ಜೀವಂತವಾಗಿದ್ದು, ಹಳ್ಳಿಯ ಮಕ್ಕಳಿಗೆ ಶಿಕ್ಷಣ ನೀಡಿದ ಶ್ರೀಗಳ ಚಿಂತನೆಗಳು ಜನರಲ್ಲಿ ಶಾಶ್ವತವಾಗಿ ಉಳಿದಿವೆ ಎಂದು ಅವರು ಹೇಳಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa