ರೈತರಿಂದ ವಾಹನ ತಡೆದು ಪ್ರತಿಭಟನೆ
ಉಂಟಾಗಿದೆ
ಫೋಟೋ


ಗದಗ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಯಳವತ್ತಿಯಿಂದ ಲಕ್ಷ್ಮೇಶ್ವರಕ್ಕೆ ಸಂಪರ್ಕ ಕಲ್ಪಿಸುವ ರೈತರ ಜಮೀನಿಗೆ ಹೋಗುವ ರಸ್ತೆ ಮೇಲೆ ಭಾರಿ ವಾಹನಗಳ ಸಂಚಾರದಿಂದ ಹದಗೆಟ್ಟಿದ್ದು, ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಪ್ರಧಾನ ಮಂತ್ರಿ ಸಡಕ್ ಯೋಜನೆಯಡಿ 2021ರಲ್ಲಿ ನಿರ್ಮಿಸಲಾದ ಈ ರಸ್ತೆ ರೈತರಿಗೆ ಬಹಳ ಅನುಕೂಲಕರವಾಗಿತ್ತು. ಕೃಷಿ ಕಾರ್ಯಗಳಿಗೆ, ಬಿತ್ತನೆ ಹಾಗೂ ಕೊಯ್ಲು ಸಮಯದಲ್ಲಿ ಈ ಮಾರ್ಗ ಪ್ರಮುಖ ಸಂಪರ್ಕವಾಗಿತ್ತು. ಆದರೆ ಇತ್ತೀಚೆಗೆ ಗಾಳಿ ಯಂತ್ರ ಕಂಪನಿಗಳ ಭಾರಿ ತೂಕದ ವಾಹನಗಳು ನಿರಂತರವಾಗಿ ಸಂಚರಿಸುತ್ತಿರುವುದರಿಂದ ರಸ್ತೆ ಸಂಪೂರ್ಣ ಹಾನಿಗೊಳಗಾಗುವ ಸ್ಥಿತಿ ಉಂಟಾಗಿದೆ.

ಇದರಿಂದ ರಸ್ತೆ ಮಾತ್ರವಲ್ಲದೆ ಮೇಲ್ಸೇತುವೆಗಳು ಕೂಡ ಕುಸಿದು ಬೀಳುವ ಹಂತಕ್ಕೆ ತಲುಪಿರುವುದಾಗಿ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ರೈತರು ತಮ್ಮ ಹೊಲಗಳಿಗೆ ತೆರಳಲು, ಬಿತ್ತನೆ ಹಾಗೂ ಇತರ ಕೃಷಿ ಚಟುವಟಿಕೆಗಳನ್ನು ನಡೆಸಲು ಭಾರೀ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.

ಈ ಹಿನ್ನೆಲೆ ಗ್ರಾಮಸ್ಥರು ಹಾಗೂ ರೈತರು ಒಗ್ಗೂಡಿ ಭಾರಿ ವಾಹನಗಳ ಸಂಚಾರವನ್ನು ತಡೆದು ಪ್ರತಿಭಟನೆ ನಡೆಸಿದರು. ಸಮಸ್ಯೆಗೆ ತಕ್ಷಣ ಪರಿಹಾರ ಕಲ್ಪಿಸಬೇಕು, ಭಾರಿ ವಾಹನಗಳ ಸಂಚಾರಕ್ಕೆ ನಿಯಂತ್ರಣ ಹೇರಬೇಕು ಹಾಗೂ ಹಾನಿಗೊಳಗಾದ ರಸ್ತೆಯನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಆರ್.ಬಿ. ಅಜ್ಜನಗೌಡ್ರು, ಸುರೇಶ್ ಬೀರಣ್ಣವರ್, ಉಮೇಶ್ ಜೋಶಿ, ಫಕೀರೇಶ ಜವಳಿ, ವಸಂತ್ ಗೌಡ ಬಾಗೇವಾಡಿ, ಹುಸೇನ್ ಸಾಬ್ ಮಸೂತಿ, ಶಿವಣ್ಣ ಗಡಿಯನ್ನವರ, ನಾಗಪ್ಪ ಹೂಗಾರ್, ಬಸವರಾಜ್ ನೀಲಗುಂದ್, ಖಾದರ್ ಸಾಬ್, ಚಪ್ಪಗೌಡ ನಿಂಗನಗೌಡ್ರ, ರಾಜಪ್ಪ ಬ್ಯಾಟಿ, ಉದಯ್ ಹೂಗಾರ, ಬಸುಗಡೆಣ್ಣವರ, ರುದ್ರಗೌಡ ಪಾಟೀಲ್ ಸೇರಿದಂತೆ ಅನೇಕ ರೈತರು ಭಾಗವಹಿಸಿದ್ದರು.

ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande