ಗದಗ ಜಿಲ್ಲೆಯಲ್ಲಿ ಮುಂದುವರೆದ ಸಿಲಿಂಡರ್ ಹಾಹಾಕಾರ
ಗದಗ, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಅಡುಗೆ ಅನಿಲ ಸಿಲಿಂಡರ್ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮುಂದುವರಿದ ಈ ಸಮಸ್ಯೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಪ
ಫೋಟೋ


ಗದಗ, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಅಡುಗೆ ಅನಿಲ ಸಿಲಿಂಡರ್ ಕೊರತೆ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಳೆದ ಒಂದು ವಾರದಿಂದ ನಿರಂತರವಾಗಿ ಮುಂದುವರಿದ ಈ ಸಮಸ್ಯೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ.

ಪಟ್ಟಣದ ಸಿದ್ದನಬಾವಿ ಓಣಿಯಲ್ಲಿರುವ ಇಂಡಿಯನ್ ಗ್ಯಾಸ್ ಏಜನ್ಸಿ ಮುಂದೆ ಪ್ರತಿದಿನವೂ ನೂರಾರು ಜನರು ಸೇರಿ, ಅರ್ಧ ಕಿಲೋಮೀಟರ್ಗೂ ಅಧಿಕ ಉದ್ದದ ಸಾಲಿನಲ್ಲಿ ನಿಂತು ಸಿಲಿಂಡರ್ ಪಡೆಯಲು ಹರಸಾಹಸ ಪಡುತ್ತಿದ್ದಾರೆ.

ಬೆಳಗ್ಗಿನ ಜಾವವೇ ಖಾಲಿ ಸಿಲಿಂಡರ್ ಹಿಡಿದು ಬರುವ ಜನರು, ಗಂಟೆಗಟ್ಟಲೆ ಕಾಯಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ಗ್ರಾಮೀಣ ಪ್ರದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ನರಗುಂದಕ್ಕೆ ಆಗಮಿಸುತ್ತಿದ್ದು, ಮಹಿಳೆಯರು, ವೃದ್ಧರು ಸೇರಿದಂತೆ ಎಲ್ಲ ವರ್ಗದ ಜನರು ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಊಟ-ನಿದ್ದೆ ಮರೆತು ನಸುಕಿನಿಂದಲೇ ಸಾಲಿನಲ್ಲಿ ನಿಂತರೂ ಸಿಲಿಂಡರ್ ಸಿಗುವುದೇ ಎಂಬ ಆತಂಕ ಜನರನ್ನು ಕಾಡುತ್ತಿದೆ.

ಸ್ಥಳೀಯರ ಪ್ರಕಾರ, ಸರಬರಾಜಿನಲ್ಲಿ ಉಂಟಾದ ವ್ಯತ್ಯಯವೇ ಸಮಸ್ಯೆಗೆ ಪ್ರಮುಖ ಕಾರಣವಾಗಿದ್ದು, ಏಜನ್ಸಿಗೆ ಅಗತ್ಯ ಪ್ರಮಾಣದಲ್ಲಿ ಸಿಲಿಂಡರ್ಗಳು ತಲುಪದೇ ಇರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎನ್ನಲಾಗಿದೆ.

ಕೆಲವರು ಎರಡು-ಮೂರು ದಿನಗಳಿಂದ ನಿರಂತರವಾಗಿ ಬಂದು ಕಾಯುತ್ತಿದ್ದರೂ ಸಿಲಿಂಡರ್ ಸಿಗದೆ ನಿರಾಶೆಯಿಂದ ಹಿಂದಿರುಗುತ್ತಿದ್ದಾರೆ.

ಇದರ ನಡುವೆಯೂ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಯಾವುದೇ ಸ್ಪಷ್ಟ ಕ್ರಮ ಕೈಗೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಸಮಸ್ಯೆ ತಕ್ಷಣ ಪರಿಹರಿಸಬೇಕು, ನಿಯಮಿತ ಸರಬರಾಜು ಖಚಿತಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳು ತುರ್ತಾಗಿ ಮಧ್ಯಪ್ರವೇಶಿಸಿ ಸಮಸ್ಯೆ ನಿವಾರಣೆ ಮಾಡುವ ಅಗತ್ಯವಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಇಳಿಯುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande