
ಬಾಗಲಕೋಟೆ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಎಸ್ಟಿ ವಿಚಾರದಲ್ಲಿ ರಾಜ್ಯದ ಜನರಿಗೆ ಅರ್ಧಸತ್ಯವನ್ನು ಮಾತ್ರ ಬಿಚ್ಚಿಡುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದರು.
ಬಾಗಲಕೋಟೆ ಉಪಚುನಾವಣೆ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ವಿಧಾನಸಭೆ ಸದನದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರ ಜಿಎಸ್ಟಿ ಪರಿಹಾರವನ್ನು ನಿಲ್ಲಿಸಿದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿರುವುದು ಸಂಪೂರ್ಣ ತಪ್ಪು ಎಂದು ಹೇಳಿದರು.
ಜಿಎಸ್ಟಿ ಕಾಯಿದೆ 2017ರಲ್ಲಿ ಅನುಷ್ಠಾನಗೊಂಡಿದ್ದು, 17ನೇ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿಗಳಿಗೆ ಇದರ ಬಗ್ಗೆ ಕನಿಷ್ಠ ಅರಿವು ಇರಬೇಕಿತ್ತು ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು. ಜಿಎಸ್ಟಿ ಕಾಯಿದೆಯಲ್ಲಿ ಯಾವ ರಾಜ್ಯಗಳು ಹೆಚ್ಚು ತೆರಿಗೆ ನೀಡುತ್ತವೆಯೋ ಆ ರಾಜ್ಯಗಳಿಗೆ ಮಾತ್ರ ಪರಿಹಾರ ನೀಡುವ ವ್ಯವಸ್ಥೆ ಇದೆ ಎಂದು ಅವರು ಹೇಳಿದರು.
ಈ ವಿಷಯ ಮುಖ್ಯಮಂತ್ರಿಗಳಿಗೆ ತಿಳಿದಿಲ್ಲವೇ? ಏಕೆ ಪದೆ ಪದೆ ಇದೇ ವಿಚಾರದಲ್ಲಿ ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಮೊದಲು ಶೇಕಡಾ 41.50ರಷ್ಟಿದ್ದ ಪಾಲನ್ನು 40ಕ್ಕೆ ಇಳಿಸಿದರೂ, ರಾಜ್ಯಗಳ ಪಾಲುದಾರಿಕೆ ಆಧಾರದಲ್ಲಿ ಶೇಕಡಾ 41.33ರಷ್ಟು ಜಿಎಸ್ಟಿ ಪರಿಹಾರ ನೀಡುತ್ತಿದೆ ಎಂದು ವಿವರಿಸಿದರು.
ಆದರೆ ಈ ಎಲ್ಲ ಅಂಕಿ-ಅಂಶಗಳನ್ನು ಮರೆಮಾಚಿ ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಈ ರೀತಿ ಕೆಟ್ಟ ರಾಜಕೀಯ ಮಾಡುವುದು ಸರಿಯಲ್ಲ ಎಂದು ವಿಜಯೇಂದ್ರ ಹರಿಹಾಯ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande