
ವಿಜಯಪುರ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : 0-6 ವರ್ಷದೊಳಗಿನ ಅನಾಥ ಮಕ್ಕಳನ್ನು ಕೌಟುಂಬಿಕ ಪರಿಸರದಲ್ಲಿ ಬೆಳೆಸಿ ಉತ್ತಮ ಪ್ರಜೆಯಾಗಿಸುವ ಉದ್ದೇಶದಿಂದ ಮಕ್ಕಳಿಲ್ಲದವರು ಅಥವಾ ಏಕಪಾಲಕರು ವಿಶೇಷ ದತ್ತು ಕೇಂದ್ರದ ಮೂಲಕ ಕಾನೂನು ಬದ್ಧವಾಗಿ ಮಗು ದತ್ತು ಸ್ವೀಕರಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ಆನಂದ್ ಕೆ. ಹೇಳಿದರು.
ವಿಜಯಪುರ ನಗರದ ಟಕ್ಕೆಯಲ್ಲಿರುವ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ ಹೊಸ ಸರ್ಕಾರಿ ದತ್ತು ಸಂಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿರುವ ಅನಾಥ ಹಾಗೂ ಪೋಷಕರಿಂದ ಒಪ್ಪಿಸಲ್ಪಟ್ಟ ಮಕ್ಕಳನ್ನು ಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ಕಾಯ್ದೆ-2015 ಹಾಗೂ ದತ್ತು ಮಾರ್ಗಸೂಚಿ-2017ರನ್ವಯ ಕಾನೂನಾತ್ಮಕವಾಗಿ ದತ್ತು ಪಡೆಯಲು ಅವಕಾಶವಿದೆ ಎಂದು ತಿಳಿಸಿದರು.
ಮಕ್ಕಳಿಲ್ಲದವರು ಈ ಕೇಂದ್ರದ ಮೂಲಕ ಮಕ್ಕಳನ್ನು ದತ್ತು ಪಡೆದು ಅವರಿಗೆ ಉತ್ತಮ ಭವಿಷ್ಯ ಒದಗಿಸಬಹುದು. ಜೊತೆಗೆ ಪೋಷಣೆ ಮತ್ತು ರಕ್ಷಣೆ ಅಗತ್ಯವಿರುವ ಮಕ್ಕಳನ್ನು ಸರ್ಕಾರಿ ದತ್ತು ಸಂಸ್ಥೆಯಲ್ಲಿ ದಾಖಲಿಸಬಹುದಾಗಿದೆ ಎಂದರು.
ಆಸ್ಪತ್ರೆಗಳಲ್ಲಿ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗಿರುವ ಮಕ್ಕಳನ್ನು ನೇರವಾಗಿ ಯಾರಾದರೂ ದತ್ತು ಪಡೆಯುವುದು ಕಾನೂನು ಬಾಹಿರವಾಗಿದೆ. ಈ ರೀತಿಯ ಕ್ರಮಗಳಿಗೆ ಕಠಿಣ ಶಿಕ್ಷೆಯ ವ್ಯವಸ್ಥೆ ಕಾನೂನಿನಲ್ಲಿ ಇದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಿರೂಪಣಾಧಿಕಾರಿ ನಿರ್ಮಲಾ ಎಚ್. ಸುರಪುರ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಎಸ್. ಜಾನಕಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಬಸಮ್ಮ ಹತ್ತರಕಿ, ಬಾಲಕರ ಬಾಲಮಂದಿರ ಕಿರಿಯ ಸಂಸ್ಥೆಯ ಅಧಿಕ್ಷಕಿ ಜಯಶ್ರೀ ಪವಾರ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / jyothi deshpande