ರಾಜ್ಯದಲ್ಲಿ ಇಂದಿನಿಂದ ಜನಗಣತಿ ಪ್ರಕ್ರಿಯೆ ಆರಂಭ
ಬೆಂಗಳೂರು, 01 ಏಪ್ರಿಲ್ (ಹಿ.ಸ.) : ಆ್ಯಂಕರ್ : ರಾಜ್ಯದಲ್ಲಿ ಇಂದಿನಿಂದ ಜನಗಣತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದ್ದು, ಈ ಬಾರಿ ಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಜೊತೆಗೆ ಜನರಿಗೆ ಸ್ವಯಂ ಗಣತಿ ಮಾಡುವ ಅವಕಾಶವನ್ನು ಸರ್ಕಾರ ಒದಗಿಸಿದೆ. ಮೊದಲ ಹಂತದಲ್ಲಿ ಮನೆಗಳ ಗಣತಿ ನಡೆಯಲಿದ್ದು, ಎರಡನೇ ಹ
Census


ಬೆಂಗಳೂರು, 01 ಏಪ್ರಿಲ್ (ಹಿ.ಸ.) :

ಆ್ಯಂಕರ್ : ರಾಜ್ಯದಲ್ಲಿ ಇಂದಿನಿಂದ ಜನಗಣತಿ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದ್ದು, ಈ ಬಾರಿ ಗಣತಿ ಎರಡು ಹಂತಗಳಲ್ಲಿ ನಡೆಯಲಿದೆ. ಜೊತೆಗೆ ಜನರಿಗೆ ಸ್ವಯಂ ಗಣತಿ ಮಾಡುವ ಅವಕಾಶವನ್ನು ಸರ್ಕಾರ ಒದಗಿಸಿದೆ.

ಮೊದಲ ಹಂತದಲ್ಲಿ ಮನೆಗಳ ಗಣತಿ ನಡೆಯಲಿದ್ದು, ಎರಡನೇ ಹಂತದಲ್ಲಿ ಜನರ ವಿವರಗಳ ಗಣತಿ ಕೈಗೊಳ್ಳಲಾಗುತ್ತದೆ. ಇಂದಿನಿಂದಲೇ ಸ್ವಯಂ ಗಣತಿ ಪ್ರಕ್ರಿಯೆಯೂ ಆರಂಭಗೊಂಡಿದೆ.

ಸ್ವಯಂ ಗಣತಿಯ ಮೂಲಕ ನಾಗರಿಕರು ತಾವೇ ತಮ್ಮ ಮನೆ ಹಾಗೂ ಕುಟುಂಬದ ವಿವರಗಳನ್ನು ಆನ್ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಕುಟುಂಬದ ಯಾವುದೇ ಒಬ್ಬ ಸದಸ್ಯರು ಅಧಿಕೃತ ವೆಬ್ ಪೋರ್ಟಲ್ಗೆ ಭೇಟಿ ನೀಡಿ ವಿವರಗಳನ್ನು ಭರ್ತಿ ಮಾಡಬಹುದು. ನೋಂದಣಿ ಪೂರ್ಣಗೊಂಡ ಬಳಿಕ ಸ್ವಯಂ ಗಣತಿ ಐಡಿ ಮೊಬೈಲ್ ಅಥವಾ ಇಮೇಲ್ ಮೂಲಕ ಲಭ್ಯವಾಗಲಿದೆ.

ಏಪ್ರಿಲ್ 1ರಿಂದ ಏಪ್ರಿಲ್ 15ರವರೆಗೆ ಸ್ವಯಂ ಗಣತಿಗೆ ಅವಕಾಶ ನೀಡಲಾಗಿದ್ದು, ನಂತರ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಗಣತಿ ನಡೆಸಲಿದ್ದಾರೆ. ಎರಡನೇ ಹಂತದಲ್ಲಿ ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಮನೆಗಳಿಗೆ ಭೇಟಿ ನೀಡಿ, ಸ್ವಯಂ ಗಣತಿಯಲ್ಲಿ ನೀಡಿದ ಮಾಹಿತಿಯನ್ನು ಪರಿಶೀಲಿಸಿ ದೃಢೀಕರಿಸಲಿದ್ದಾರೆ.

ಸ್ವಯಂ ಗಣತಿ ವಿಧಾನ: ಅಧಿಕೃತ ಪೋರ್ಟಲ್ಗೆ ಲಾಗಿನ್ ಆಗಿ, ಮೊಬೈಲ್ ಸಂಖ್ಯೆಗೆ ಬಂದ ಓಟಿಪಿ ಮೂಲಕ ಪ್ರವೇಶಿಸಿ, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ವಿವರಗಳನ್ನು ನಮೂದಿಸಬೇಕು. ನಂತರ ಡಿಜಿಟಲ್ ಮ್ಯಾಪ್ನಲ್ಲಿ ಮನೆಯ ಸ್ಥಳವನ್ನು ಗುರುತಿಸಿ, ಕುಟುಂಬದ ವಿವರಗಳನ್ನು ಭರ್ತಿ ಮಾಡಬೇಕು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ವಯಂ ಗಣತಿ ಐಡಿ ಲಭ್ಯವಾಗಲಿದೆ. ಈ ಐಡಿಯನ್ನು ಸುರಕ್ಷಿತವಾಗಿ ಇಟ್ಟುಕೊಂಡು, ಗಣತಿದಾರರು ಮನೆಗೆ ಬಂದಾಗ ಒದಗಿಸಬೇಕು.

ಡಿಜಿಟಲ್ ವ್ಯವಸ್ಥೆಯೊಂದಿಗೆ ಜನಗಣತಿ ನಡೆಸಲಾಗುತ್ತಿರುವುದು ಈ ಬಾರಿ ವಿಶೇಷವಾಗಿದ್ದು, ಜನರ ಸಕ್ರಿಯ ಭಾಗವಹಿಸುವಿಕೆಯಿಂದ ಗಣತಿ ಪ್ರಕ್ರಿಯೆ ಇನ್ನಷ್ಟು ಪರಿಣಾಮಕಾರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande