
ಬಳ್ಳಾರಿ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ‘ಜನಗಣತಿ-2027' ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಏ.16 ರ ವರೆಗೆ ಸ್ವಯಂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದ್ದು, ಬಳ್ಳಾರಿ ತಾಲ್ಲೂಕು ವ್ಯಾಪ್ತಿಯ ಸಾರ್ವಜನಿಕರು ಮಾಹಿತಿ ನೋಂದಾಯಿಸಬೇಕು ಎಂದು ಬಳ್ಳಾರಿ ತಾಲ್ಲೂಕು ತಹಶೀಲ್ದಾರರಾದ ಟಿ.ರೇಖಾ ಅವರು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲಯವು ಈ ಬಾರಿ ಜನಗಣತಿಯನ್ನು ಎರಡು ಹಂತಗಳಲ್ಲಿ ನಡೆಸಲು ಉದ್ದೇಶಿಸಿದೆ. ಮೊದಲ ಹಂತದ ಆರಂಭದ 15 ದಿನಗಳ ಕಾಲ (ಏಪ್ರಿಲ್ 1 ರಿಂದ ಏಪ್ರಿಲ್ 15 ರವರೆಗೆ) ಸಾರ್ವಜನಿಕರು ತಾವಾಗಿಯೇ ಆನ್ಲೈನ್ ಮೂಲಕ ಮಾಹಿತಿ ನೀಡಲು ‘ಸ್ವಯಂ-ಗಣತಿ' ಗೆ ಅವಕಾಶ ಕಲ್ಪಿಸಲಾಗಿದೆ.
ಬಳಿಕ ಏ.16 ರಿಂದ ಮೇ 15 ರವರೆಗೆ ಮನೆಗಳ ಪಟ್ಟಿ ಮತ್ತು ಮನೆ ಗಣತಿ ಕಾರ್ಯ ಆರಂಭವಾಗಲಿದೆ.
ಸಾರ್ವಜನಿಕರು https://se.census.gov.in ಜಾಲತಾಣಕ್ಕೆ ಭೇಟಿ ನೀಡಿ ಮಾಹಿತಿ ದಾಖಲಿಸಬಹುದು. ಮನೆಯ ಒಬ್ಬ ಸದಸ್ಯರು ಸುಮಾರು 15-20 ನಿಮಿಷಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು.
ಆನ್ಲೈನ್ನಲ್ಲಿ ಮಾಹಿತಿ ನೀಡಿದ ನಂತರ ಒಂದು ‘ಸ್ವಯಂ-ಗಣತಿ ಐಡಿ' ದೊರೆಯುತ್ತದೆ. ನಂತರ ಗಣತಿದಾರರು ಮನೆಗೆ ಭೇಟಿ ನೀಡಿದಾಗ ಈ ಐಡಿಯನ್ನು ಅವರಿಗೆ ತೋರಿಸಿ ಮಾಹಿತಿಯನ್ನು ದೃಢೀಕರಿಸಬೇಕಾಗುತ್ತದೆ.
ಹಾಗಾಗಿ ಬಳ್ಳಾರಿ ತಾಲ್ಲೂಕಿನ ಗ್ರಾಮೀಣ ಭಾಗದ ಎಲ್ಲಾ ಗ್ರಾಮಗಳ ನಾಗರಿಕರು ಯಾವುದೇ ಆತಂಕವಿಲ್ಲದೆ ಸಕ್ರಿಯವಾಗಿ ಭಾಗವಹಿಸಿ ಜನಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್