
ಬಾಗಲಕೋಟೆ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯ ಪ್ರಚಾರದ ವೇಳೆ ತಾಯಿಯೊಬ್ಬರು ಕಾಂಗ್ರೆಸ್ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಗರದಲ್ಲಿ ನಡೆದಿದೆ.
ನಗರದ ನವನಗರ ಬಡಾವಣೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಕಾಂಗ್ರೆಸ್ ಮುಖಂಡ ರಮೇಶ್ ಬದ್ನೂರ ಹಾಗೂ ಕಾರ್ಯಕರ್ತರ ಎದುರು ಮಹಿಳೆ ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣೆ ಬಂದಾಗ ಮಾತ್ರ ಮತ ಕೇಳಲು ಮನೆ ಮುಂದೆ ಬರುತ್ತೀರಿ, ಆದರೆ ನಮ್ಮ ಸಂಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ ಎಂದು ಅವರು ಪ್ರಶ್ನಿಸಿದರು. ಸಣ್ಣ ಜಗಳದ ಪ್ರಕರಣದಲ್ಲಿ ತಮ್ಮ ಮಗ ಕಳೆದ ಒಂದು ತಿಂಗಳಿನಿಂದ ಜೈಲಿನಲ್ಲಿ ಇದ್ದರೂ, ಈವರೆಗೆ ಯಾರೂ ಸಹಾಯಕ್ಕೆ ಬಂದಿಲ್ಲ. ಆಗ ನಾನೇ ಖುದ್ದಾಗಿ ನ್ಯಾಯ ಕೊಡಿಸಿ ಎಂದು ಎಲ್ಲರ ಕಚೇರಿಗಳಿಗೆ ಅಲೆದಾಡಿದೆ. ಆದರೆ ಯಾರೊಬ್ಬರೂ ಸಹಾಯಕ್ಕೆ ಮುಂದೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ಈಗ ಮತ ಕೇಳಲು ಬಂದರೆ ಹೇಗೆ ಎಂದು ತಾಯಿ ಕಣ್ಣೀರಿನಿಂದ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಖಂಡರ ಎದುರು ನಡೆದ ಈ ಘಟನೆ ಕೆಲಕಾಲ ಸ್ಥಳದಲ್ಲಿ ನೀರವ ಮೌನದ ವಾತಾವರಣಕ್ಕೆ ಕಾರಣವಾಯಿತು. ತಾಯಿಯ ಪ್ರಶ್ನೆಗಳಿಗೆ ಉತ್ತರ ನೀಡಲು ಸಾಧ್ಯವಾಗದೇ ಕಾಂಗ್ರೆಸ್ ಮುಖಂಡರು ಅಲ್ಲಿಂದ ಪಲಾಯನ ಮಾಡಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande