
ಬಾಗಲಕೋಟೆ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಗಿ ಕ್ರಾಸ್ ಹತ್ತಿರ ಕೃಷ್ಣ ನದಿಗೆ ನಿರ್ಮಾಣವಾಗುತ್ತಿರುವ ಬ್ಯಾರೇಜ್ ಕಾಮಗಾರಿ ಸುಮಾರು 13 ವರ್ಷಗಳಿಂದ ಪೂರ್ಣಗೊಳ್ಳದೆ ಇರುವ ಹಿನ್ನೆಲೆಯಲ್ಲಿ ರೈತರು ಉಪವಾಸ ಸತ್ಯಾಗ್ರಹ ಆರಂಭಿಸಿದ್ದು, ಹೋರಾಟಕ್ಕೆ ಒಂದು ತಿಂಗಳು ಪೂರ್ಣಗೊಂಡಿದೆ.
ಕಾಮಗಾರಿ ವಿಳಂಬದಿಂದ ರೈತರಿಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿರುವ ರೈತರು, ಬ್ಯಾರೇಜ್ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಆದರೆ ಇಷ್ಟು ದಿನಗಳಾದರೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸಚಿವರು, ಸ್ಥಳೀಯ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ರೈತರ ಸಮಸ್ಯೆ ಕೇಳಿಲ್ಲ ಎಂದು ಹೋರಾಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಂದು ಹೋರಾಟದ ಸ್ಥಳಕ್ಕೆ ಭೀಮರಾಜ ಸೇನೆ ರಾಜ್ಯಾಧ್ಯಕ್ಷ ಎನ್. ಶಿವು ಸೋಂಪುರ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಬಿಜಾಪುರ ಭೇಟಿ ನೀಡಿ ರೈತರಿಗೆ ಬೆಂಬಲ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಿಂದಗಿ ತಾಲೂಕು ಭೀಮರಾಜ ಸೇನೆ ಅಧ್ಯಕ್ಷರು, ಮಹಾಂತೇಶ ಬಳಗಾನೂರ, ರೈತ ಹೋರಾಟಗಾರ ಅಪ್ಪಣ ಸೋರ್ಯವಂಶಿ ಸೇರಿದಂತೆ ಹಲವರು ಹೋರಾಟದಲ್ಲಿ ಭಾಗವಹಿಸಿದ್ದರು.
ರೈತರ ಬೇಡಿಕೆಗಳನ್ನು ತಕ್ಷಣ ಪರಿಗಣಿಸಿ ಬ್ಯಾರೇಜ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಹೋರಾಟಗಾರರು ಸರ್ಕಾರಕ್ಕೆ ಒತ್ತಾಯಿಸಿದರು.
ಹಿಂದೂಸ್ತಾನ್ ಸಮಾಚಾರ್ / jyothi deshpande