
ಗದಗ, 01 ಏಪ್ರಿಲ್ (ಹಿ.ಸ.) :
ಆ್ಯಂಕರ್ : ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಗತ್ಯಗಳಿಗೆ ಸ್ಪಂದಿಸುವುದೇ ನಿಜವಾದ ಜನಸೇವೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ.
ಸಚಿವರ ಸುಪುತ್ರರಾದ ಕೃಷ್ಣಗೌಡ್ರು ಪಾಟೀಲರು ಸವಿತಾ ಸಮಾಜದ ಅಭಿವೃದ್ಧಿಗಾಗಿ ₹10 ಲಕ್ಷ ವಿಶೇಷ ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಜನಮನ ಗೆದ್ದಿದ್ದಾರೆ.
ಗದಗ ನಗರದ ಗಂಗಿಮಡಿ ಬಡಾವಣೆಯಲ್ಲಿ ಸವಿತಾ ಸಮಾಜ ಸುಧಾರಣಾ ಸಂಘದ ಸಮುದಾಯ ಭವನ ಹಾಗೂ ಶ್ರೀ ನಾಗದೇವರ ದೇವಸ್ಥಾನದ ನಿರ್ಮಾಣಕ್ಕಾಗಿ ಈ ಅನುದಾನವನ್ನು ನೀಡಲಾಗಿದೆ. ಈ ಮೂಲಕ ಹಲವು ವರ್ಷಗಳಿಂದ ಸಮಾಜದ ಜನರು ಕಂಡುಕೊಂಡಿದ್ದ ಕನಸು ಸಾಕಾರವಾಗುವ ಹಂತಕ್ಕೆ ಬಂದಿದೆ.
ಮನವಿಗೆ ಕ್ಷಿಪ್ರ ಸ್ಪಂದನೆ
ಸವಿತಾ ಸಮಾಜದ ಅಭಿವೃದ್ಧಿಗಾಗಿ ಅನುದಾನ ಕೋರಿ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರ ನೇತೃತ್ವದಲ್ಲಿ ನಿಯೋಗ ಮನವಿ ಸಲ್ಲಿಸಿತ್ತು.
ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಕೃಷ್ಣಗೌಡ್ರು ಪಾಟೀಲರು ಯಾವುದೇ ವಿಳಂಬ ಮಾಡದೆ ತಕ್ಷಣವೇ ಅನುದಾನ ಮಂಜೂರು ಮಾಡಿಸಿ, ಅಧಿಕಾರಿಗಳಿಗೆ ಅಧಿಕೃತ ಆದೇಶ ನೀಡಿಸಿದ್ದಾರೆ. ಇದೇ ತಿಂಗಳ 10ರಂದು ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ.
ಹಡಪದ ಅವರ ಹೋರಾಟಕ್ಕೆ ಫಲ
ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರ ನಿರಂತರ ಪ್ರಯತ್ನ ಮತ್ತು ದೂರದೃಷ್ಟಿಯ ಫಲವಾಗಿ ಈ ಅನುದಾನ ದೊರೆತಿದೆ. ರಾಜ್ಯ ನಾಯಕರಾದ ಹನುಮಂತಪ್ಪ ರಾಂಪೂರ ಅವರ ಮಾರ್ಗದರ್ಶನದಲ್ಲಿ ಸಮಾಜದ ಪರವಾಗಿ ನಿರಂತರ ಹೋರಾಟ ನಡೆಸಿದ ಪರಿಣಾಮವಾಗಿ ಸರ್ಕಾರದ ಮಟ್ಟದಲ್ಲಿ ಧ್ವನಿ ತಲುಪಿದ್ದು, ಈ ಸಾಧನೆ ಸಾಧ್ಯವಾಗಿದೆ. ಇದು ಸವಿತಾ ಸಮಾಜದ ಸಂಘಟಿತ ಶಕ್ತಿಗೆ ದೊರೆತ ಜಯವಾಗಿದೆ.
ಸಿಹಿ ಹಂಚಿ ಸಂಭ್ರಮ
ಅನುದಾನ ಮಂಜೂರಾದ ಸಂತೋಷದಲ್ಲಿ ಇಂದು ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್. ಹಡಪದ ಅವರ ನೇತೃತ್ವದ ನಿಯೋಗವು ಕೃಷ್ಣಗೌಡ್ರು ಪಾಟೀಲರನ್ನು ಭೇಟಿ ಮಾಡಿ ಸಿಹಿ ತಿನ್ನಿಸಿ ಅಭಿನಂದನೆ ಸಲ್ಲಿಸಿತು.
ಈ ಸಂದರ್ಭದಲ್ಲಿ ಉತ್ತರ ಕರ್ನಾಟಕ ವಿಭಾಗೀಯ ಕಾರ್ಯದರ್ಶಿಗಳಾದ ಹನುಮಂತಪ್ಪ ರಾಂಪೂರ ಮಾತನಾಡಿ, ಕೃಷ್ಣಗೌಡ್ರು ಪಾಟೀಲರ ಸರಳತೆ ಹಾಗೂ ಅಭಿವೃದ್ಧಿ ಪರ ಚಿಂತನೆ ಸಮಾಜಕ್ಕೆ ಮಾದರಿ. ಅವರ ಸಹಕಾರ ಇತಿಹಾಸದಲ್ಲಿ ಸ್ಮರಣೀಯವಾಗಲಿದೆ ಎಂದು ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಸವಿತಾ ಸಮಾಜದ ಮುಖಂಡರು, ಹಿರಿಯರು ಹಾಗೂ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದು ಸಂತೋಷ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / lalita MP