
ಹಾವೇರಿ, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ನಿಸರ್ಗವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಅದನ್ನು ಹಾಳು ಮಾಡುವುದು ಭವಿಷ್ಯದ ಪೀಳಿಗೆಯಿಂದ ಕಳ್ಳತನ ಮಾಡಿದಂತೆಯೇ ಆಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಸವಣೂರಿನ ಶ್ರೀ ದೊಡ್ಡಹುಣಸೆ ಕಲ್ಮಠದಲ್ಲಿ ಲಿಂಗೈಕ್ಯ ಶ್ರೀ ಗುರು ರಾಚೋಟೇಶ್ವರ ಮಹಾಸ್ವಾಮಿಗಳವರ 49ನೇ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ನಿಸರ್ಗವು ಮಾನವಕುಲಕ್ಕೆ ದೊರೆತ ದತ್ತಿ ಎಂದು ಹೇಳಿದರು.
ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ದೊಡ್ಡ ಹುಣಸೆಮರ ನಿಸರ್ಗದ ಶಕ್ತಿಗೆ ಸಾಕ್ಷಿಯಾಗಿದೆ. ಕೆಲವು ವರ್ಷಗಳ ಹಿಂದೆ ಮರ ಬಿದ್ದರೂ ತಜ್ಞರ ಸಲಹೆ ಹಾಗೂ ಅರಣ್ಯ ಇಲಾಖೆಯ ನೆರವಿನಿಂದ ಮತ್ತೆ ಚಿಗುರಿರುವುದು ನಿಸರ್ಗದ ಅಂತರಂಗ ಶಕ್ತಿಯ ಉದಾಹರಣೆ ಎಂದರು.
ನಮ್ಮ ದುರಾಸೆಯಿಂದ ನಿಸರ್ಗ ನಾಶವಾಗುತ್ತಿದ್ದು, ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಬಿಟ್ಟುಕೊಡುವುದು ನಮ್ಮ ಹೊಣೆಗಾರಿಕೆ ಎಂದು ಅವರು ಹೇಳಿದರು.
ಬಸವಣ್ಣನವರ “ಕಾಯಕವೇ ಕೈಲಾಸ” ತತ್ವವನ್ನು ಉಲ್ಲೇಖಿಸಿದ ಬೊಮ್ಮಾಯಿ, ದುಡಿಮೆಯೇ ಶ್ರೇಷ್ಠ ಎಂದು ಹೇಳಿದರು. ದುಡ್ಡು ಶಾಶ್ವತವಲ್ಲ, ಆದರೆ ಪ್ರಾಮಾಣಿಕ ದುಡಿಮೆ ಶಾಶ್ವತ ಮೌಲ್ಯ ನೀಡುತ್ತದೆ ಎಂದರು.
ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರ ಪರಸ್ಪರ ವಿಭಿನ್ನವಾದರೂ, ವ್ಯವಹಾರದಲ್ಲಿ ನೀತಿ-ಧರ್ಮ ಪಾಲನೆ ಅಗತ್ಯ ಎಂದು ಹೇಳಿದರು. ಲಾಭ-ನಷ್ಟಕ್ಕಿಂತ ಸನ್ಮಾರ್ಗ ಮುಖ್ಯವೆಂದು ಬಸವಣ್ಣನವರ ಸಂದೇಶವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಹಲವು ಸ್ವಾಮೀಜಿಗಳು, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa