
ಬೆಂಗಳೂರು, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳಿಲ್ಲ, ಸರ್ಕಾರಿ ವೈದ್ಯರಿಗೆ ನೆಮ್ಮದಿಯಿಲ್ಲ, ಅವರ ಸಮಸ್ಯೆಗಳನ್ನು ಕೇಳುವವರಿಲ್ಲ. ನೆನೆಗುದಿಗೆ ಬಿದ್ದಿರುವ ನೇಮಕಾತಿ ನಿಯಮಗಳ ತಿದ್ದುಪಡಿ ಹಾಗೂ ವರ್ಗಾವಣೆ ನೀತಿಯಲ್ಲಿನ ಗೊಂದಲಗಳಿಂದ ಬೇಸತ್ತ ವೈದ್ಯರು ಇಂದು ಬೀದಿಗೆ ಇಳಿಯುವಂತಾಗಿರುವುದು ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯಕ್ಕೆ ಮತ್ತೊಂದು ಸಾಕ್ಷಿ! ಇಡೀ ರಾಜ್ಯ ಸರ್ಕಾರವೇ ರೋಗಗ್ರಸ್ತವಾಗಿರುವಂತೆ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸರಕಾರದ ವಿರುದ್ದ ಕಿಡಿಕಾರಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಔಷಧಗಳ ಕೊರತೆಯಿಂದ ಬಡ ರೋಗಿಗಳ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರ, ವೈದ್ಯರ ನ್ಯಾಯಯುತ ಬೇಡಿಕೆಗಳಿಗೆ ಕನಿಷ್ಟ ಸ್ಪಂದಿಸುವ ಸೌಜನ್ಯವನ್ನೂ ತೋರುತ್ತಿಲ್ಲ. ರಾಜಕೀಯ ಹೇಳಿಕೆಗಳನ್ನು ನೀಡುತ್ತಾ ಕಾಲ ಕಳೆಯುತ್ತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ತಮ್ಮ ಇಲಾಖೆಯತ್ತ ಗಮನ ಹರಿಸಲು ಸಮಯವಿಲ್ಲ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ಈಗಲಾದರೂ ತಕ್ಷಣವೇ ಮಧ್ಯಪ್ರವೇಶಿಸಿ ಆರೋಗ್ಯ ಸೇವೆಗಳು ಸ್ಥಗಿತಗೊಳ್ಳದಂತೆ ಕ್ರಮ ಕೈಗೊಳ್ಳಿ. ಜನಸಾಮಾನ್ಯರಿಗೆ, ಚಿಕಿತ್ಸೆ. ಆರೈಕೆ ಅಗತ್ಯವಿರುವ ಬಡ ರೋಗಗಳಿಗೆ ತೊಂದರೆ ಆಗದಂತೆ ಮುನ್ನೆಚ್ಚರಿಕೆ ವಹಿಸಿ. ಇಪ್ಪತ್ತನಾಲ್ಕು ಗಂಟೆಯೂ ಜನಸಾಮಾನ್ಯರ ಸೇವೆಯಲ್ಲಿರುವ ವೈದ್ಯರ ಹಿತ ಕಾಯುವುದು ರಾಜ್ಯ ಸರ್ಕಾರದ ಕರ್ತವ್ಯವೇ ಹೊರತು ಅವರ ತಾಳ್ಮೆ ಪರೀಕ್ಷಿಸುವುದಲ್ಲ ಎಂದಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa