
ಬೆಂಗಳೂರು, 24 ಫೆಬ್ರವರಿ (ಹಿ.ಸ.) :
ಆ್ಯಂಕರ್ : ಕಳೆದ ಮೂರು ವರ್ಷಗಳಲ್ಲಿ ವಿಪಕ್ಷಗಳು, ಮಾಧ್ಯಮದವರು ರಾಜ್ಯದ ಆರ್ಥಿಕ ಸ್ಥಿತಿಗತಿ ಬಗ್ಗೆ ಪ್ರಶ್ನೆ ಮಾಡಿದಾಗಲೆಲ್ಲಾ ತಿಪ್ಪೆ ಸಾರಿಸುವ ಮಾತಾಡಿ, ಸುಳ್ಳು ಹೇಳುತ್ತಲೇ ಬಂದಿದ್ದೀರಿ. ಈಗ ಮಾರ್ಚ್ 6ರಂದು ತಾವು ಮಂಡಿಸುವ ಬಜೆಟ್ ನಲ್ಲಿ ಗ್ಯಾರೆಂಟಿ ಹಠಾವೋ ಆಂದೋಲನ ಶುರುವಾಗುವ ಮುನ್ಸೂಚನೆಗಳು ಸಿಗುತ್ತಿವೆ. ಗ್ಯಾರೆಂಟಿ ಯೋಜನೆಗಳ ಬಗ್ಗೆ ರಾಜ್ಯದ ಜನರ ಮನದಲ್ಲಿ ಹಲವಾರು ಪ್ರಶ್ನೆಗಳಿವೆ. ಈಗಲಾದರೂ ರಾಜ್ಯದ ಜನತೆಗೆ ಮುಖ್ಯಮಂತ್ರಿ ಸತ್ಯಾಂಶ ತಿಳಿಸಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಗ್ಯಾರಂಟಿ ಯೋಜನೆಗಳ ಕುರಿತು ಹಲವು ಪ್ರಶ್ನೆ ಎತ್ತಿದ್ದಾರೆ.
ಅಸಲಿಗೆ ಗ್ಯಾರೆಂಟಿ ಯೋಜನೆಗಳ ಬಗ್ಗೆ ಐಡಿಯಾ ಕೊಟ್ಟಿದ್ದು ಯಾರು? ತಾವೋ, ಕೆಪಿಸಿಸಿ ಅಧ್ಯಕ್ಷರೋ, ಅಥವಾ ಕಾಂಗ್ರೆಸ್ ಪಕ್ಷದ ಚುನಾವಣಾ ತಂತ್ರಜ್ಞರೋ?
ಚುನಾವಣೆ ಸಂದರ್ಭದಲ್ಲಿ 5 ಗ್ಯಾರೆಂಟಿ ಯೋಜನೆಗಳನ್ನು ಘೋಷಿಸುವ ಮುನ್ನ ಇದಕ್ಕೆ ತಗುಲುವ ವೆಚ್ಚದ ಬಗ್ಗೆ ಅಂದಾಜು ಮಾಡಲಾಗಿತ್ತಾ?
ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಸಾಧ್ಯಾಧ್ಯಾತೆಗಳ ಬಗ್ಗೆ ಯಾರಾದರೂ ಆರ್ಥಿಕ ತಜ್ಞರ ಸಲಹೆ, ಅಭಿಪ್ರಾಯ ಪಡೆಯಲಾಗಿತ್ತಾ?
ಅಥವಾ ಕೇವಲ ಚುನಾವಣೆ ಗೆಲ್ಲುವ ಹಪಾಹಪಿಯಿಂದ ಯಾವುದೇ ಮುಂದಾಲೋಚನೆ ಇಲ್ಲದೆ ಬೇಕಾಬಿಟ್ಟಿ ಘೋಷಣೆ ಮಾಡಿದ್ದಾ?
ಪಂಚ ಗ್ಯಾರೆಂಟಿ ಯೋಜನೆಗಳ ಘೋಷಣೆ ಬಗ್ಗೆ ಹೈಕಮಾಂಡ್ ಸೇರಿದಂತೆ ಕಾಂಗ್ರೆಸ್ ಪಕ್ಷದಲ್ಲಿ ಸರ್ವಾನುಮತ ಇತ್ತಾ? ಅಥವಾ ಭಿನ್ನಾಭಿಪ್ರಾಯಗಳು ಇದ್ದವಾ ಎಂದು ಪ್ರಶ್ನಿಸಿದ್ದಾರೆ.
ಬಜೆಟ್ ಮಂಡನೆಗೂ ಮುನ್ನ ಕರ್ನಾಟಕದ ಮತದಾರರನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಉತ್ತರಿಸಿ, ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಒಂದು ಶ್ವೇತಪತ್ರ ಹೊರಡಿಸಿ ಎಂದು ಅಶೋಕ ಆಗ್ರಹಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa