ಕಾಶ್ಮೀರದಲ್ಲಿ ಉಗ್ರರ ನೇಮಕಾತಿ ಜಾಲದ ವಿರುದ್ಧ ಸಿಐಕೆ ದಾಳಿ: ಆರು ಸ್ಥಳಗಳಲ್ಲಿ ಶೋಧ
ಶ್ರೀನಗರ, 06 ನವೆಂಬರ್ (ಹಿ.ಸ.): ಉಗ್ರರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ (ಸಿಐಕೆ) ವಿಭಾಗವು ಶುಕ್ರವಾರ ಕಾಶ್ಮೀರದ ವಿವಿಧ ಜಿಲ್ಲೆಗಳ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನದ
सांकेतिक।


ಶ್ರೀನಗರ, 06 ನವೆಂಬರ್ (ಹಿ.ಸ.):

ಉಗ್ರರ ನೇಮಕಾತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸರ ಕೌಂಟರ್ ಇಂಟೆಲಿಜೆನ್ಸ್ ಕಾಶ್ಮೀರ (ಸಿಐಕೆ) ವಿಭಾಗವು ಶುಕ್ರವಾರ ಕಾಶ್ಮೀರದ ವಿವಿಧ ಜಿಲ್ಲೆಗಳ ಆರು ಸ್ಥಳಗಳಲ್ಲಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಈ ಪ್ರಕರಣದಲ್ಲಿ ಪಾಕಿಸ್ತಾನದಲ್ಲಿ ನೆಲೆಸಿರುವ ವ್ಯಕ್ತಿಗಳ ಸಂಪರ್ಕ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಸಿಐಕೆ ತಂಡಗಳು ಶ್ರೀನಗರ, ಬಡ್ಗಾಮ್, ದಕ್ಷಿಣ ಕಾಶ್ಮೀರದ ಬಿಜ್‌ಬೆಹರಾ ಮತ್ತು ಅನಂತನಾಗ್ ಜಿಲ್ಲೆಯ ಮಟನ್ ಪ್ರದೇಶಗಳಲ್ಲಿನ ಮನೆಗಳಲ್ಲಿ ಶೋಧ ನಡೆಸಿವೆ. ಅಲ್ಲದೆ, ಪುಲ್ವಾಮಾ ಜಿಲ್ಲೆಯ ಒಂದು ಗ್ರಾಮದಲ್ಲಿಯೂ ಶೋಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು ಮತ್ತು ಕಂದಾಯ ಅಧಿಕಾರಿಗಳ ಸಹಕಾರದೊಂದಿಗೆ ಕಾರ್ಯನಿರ್ವಾಹಕ ದಂಡಾಧಿಕಾರಿಗಳ ಸಮ್ಮುಖದಲ್ಲಿ ಈ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಸಿಐಕೆ ಶ್ರೀನಗರ ಪೊಲೀಸ್ ಠಾಣೆಯಲ್ಲಿ 2023ರ ಎಫ್‌ಐಆರ್ ಸಂಖ್ಯೆ 07/2023ರ ಅಡಿಯಲ್ಲಿ ದಾಖಲಾದ ಪ್ರಕರಣವು ಸಕ್ರಿಯವಾಗಿರುವ ಉಗ್ರರ ನೇಮಕಾತಿ ಜಾಲಕ್ಕೆ ಸಂಬಂಧಿಸಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಮೂಲಭೂತವಾದದತ್ತ ಪ್ರೇರೇಪಿಸಿ, ನಿಷೇಧಿತ ಉಗ್ರ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವ ಕಾರ್ಯದಲ್ಲಿ ಈ ಜಾಲ ತೊಡಗಿತ್ತು ಎಂಬ ಆರೋಪವಿದೆ.

ಪಾಕಿಸ್ತಾನದಲ್ಲಿ ನೆಲೆಸಿರುವ ಕೆಲವು ವ್ಯಕ್ತಿಗಳು ಲಷ್ಕರ್-ಎ-ತೊಯ್ಬಾ ಸೇರಿದಂತೆ ಇತರ ನಿಷೇಧಿತ ಉಗ್ರ ಸಂಘಟನೆಗಳ ನಿರ್ವಾಹಕರೊಂದಿಗೆ ಸಂಪರ್ಕ ಹೊಂದಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಕಾಶ್ಮೀರದ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ತನಿಖೆ ಆರಂಭಿಸಲಾಗಿತ್ತು. ದೇಶದ ಸಾರ್ವಭೌಮತ್ವ ಮತ್ತು ಅಖಂಡತೆಗೆ ಧಕ್ಕೆ ತರುವ ಉದ್ದೇಶದಿಂದ ಯುವಕರನ್ನು ಪ್ರಚೋದಿಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೋಧ ಕಾರ್ಯಾಚರಣೆಯಲ್ಲಿ ಯಾವುದೇ ವಸ್ತುಗಳು ಪತ್ತೆಯಾಗಿವೆಯೇ ಅಥವಾ ಯಾರನ್ನಾದರೂ ಬಂಧಿಸಲಾಗಿದೆಯೇ ಎಂಬ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande