
ಗಾಂಧಿನಗರ, 14 ನವೆಂಬರ್ (ಹಿ.ಸ.):
ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ರಾತ್ರಿ ಗಾಂಧಿನಗರದ ಲೋಕಭವನದಲ್ಲಿ ಗುಜರಾತ್ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸದಸ್ಯರೊಂದಿಗೆ ಮಹತ್ವದ ಸಭೆ ನಡೆಸಿದರು. ರಾತ್ರಿ 11.10ರವರೆಗೆ ನಡೆದ ಸಭೆಯ ಬಳಿಕ ಸಚಿವರೊಂದಿಗೆ ರಾತ್ರಿ ಭೋಜನದಲ್ಲಿ ಪಾಲ್ಗೊಂಡರು.
ಲೋಕಭವನದಲ್ಲಿ ಸಂಸ್ಕಾರಧಾಮ ಟ್ರಸ್ಟ್ನ ಪದಾಧಿಕಾರಿಗಳೊಂದಿಗೂ ಪ್ರಧಾನಿ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಟ್ರಸ್ಟ್ನ ಮುಂಬರುವ ಚಟುವಟಿಕೆಗಳು ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಲಾಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಕೀಲ ಸಾಹೇಬ್ ಅವರ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿ ಅವರು ಸಂಸ್ಕಾರಧಾಮ ಸಂಸ್ಥೆಯನ್ನು ಆರಂಭಿಸಿದ್ದು, ಇದು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದೆ.
ಇದಕ್ಕೂ ಮೊದಲು ಶುಕ್ರವಾರ ರಾತ್ರಿ ಸುಮಾರು 8.15ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಪ್ರಧಾನಿ ಮೋದಿ ಅವರು, ಮಾಜಿ ಸಂಸದರು ಹಾಗೂ ಮಾಜಿ ಶಾಸಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಮಾಜಿ ಸಂಸದ ಹರಿನ್ ಪಾಠಕ್, ಮಾಜಿ ಶಾಸಕರಾದ ಪ್ರದೀಪ್ ಪರ್ಮಾರ್, ಗೀತಾಬೆನ್, ಭರತ್ ಬರೋಟ್ ಮತ್ತು ಅರವಿಂದ್ ಪಟೇಲ್ ಸೇರಿದಂತೆ ಹಲವು ನಾಯಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಹಳೆಯ ನಾಯಕರ ಯೋಗಕ್ಷೇಮವನ್ನೂ ಪ್ರಧಾನಿ ವಿಚಾರಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 12.25ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೂ ಮುನ್ನ ವಿಮಾನ ನಿಲ್ದಾಣದಲ್ಲಿ ಬಿಜೆಪಿಯ ಹಿರಿಯ ಹಾಗೂ ಹಳೆಯ ನಾಯಕರೊಂದಿಗೆ ಸಂಕ್ಷಿಪ್ತ ಮಾತುಕತೆ ನಡೆಸಲಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.