ಗರ್ಭದಲ್ಲೇ ಶಿಶುವಿನ ಬೆನ್ನುಹುರಿ ಶಸ್ತ್ರಚಿಕಿತ್ಸೆ: ದೆಹಲಿಯ ಏಮ್ಸ್ನಿಂದ ದೇಶದಲ್ಲೇ ಮೊದಲ ಸಾಧನೆ
ನವದೆಹಲಿ, 14 ನವೆಂಬರ್ (ಹಿ.ಸ.): ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಗರ್ಭದಲ್ಲಿರುವ ಶಿಶುವಿನ ಬೆನ್ನುಹುರಿಯಲ್ಲಿನ ಗಂಭೀರ ಜನ್ಮಜಾತ ದೋಷಕ್ಕೆ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ. 25 ವಾರಗಳ ಗರ್
एम्स दिल्ली ने गर्भ में ही की रीढ़ की हड्डी की पहली सर्जरी


ನವದೆಹಲಿ, 14 ನವೆಂಬರ್ (ಹಿ.ಸ.):

ದೇಶದ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿರುವ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಗರ್ಭದಲ್ಲಿರುವ ಶಿಶುವಿನ ಬೆನ್ನುಹುರಿಯಲ್ಲಿನ ಗಂಭೀರ ಜನ್ಮಜಾತ ದೋಷಕ್ಕೆ ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ನಡೆಸಿ ಯಶಸ್ವಿಯಾಗಿದೆ. 25 ವಾರಗಳ ಗರ್ಭಾವಸ್ಥೆಯಲ್ಲಿದ್ದ ಶಿಶುವಿಗೆ ಸುಮಾರು ಆರು ಗಂಟೆಗಳ ಕಾಲ ನಡೆದ ಈ ಶಸ್ತ್ರಚಿಕಿತ್ಸೆಯ ಮೂಲಕ ಬೆನ್ನುಹುರಿಯ ಕೆಳಭಾಗದಲ್ಲಿದ್ದ ದೋಷವನ್ನು ಸರಿಪಡಿಸಲಾಗಿದೆ.

ಏಮ್ಸ್‌ನ ನರ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದಕ್ಕಾಗಿ ಐದು ವಾರಗಳಿಗೂ ಹೆಚ್ಚು ಕಾಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಭ್ರೂಣದ ಸಂಪೂರ್ಣ ವೈದ್ಯಕೀಯ ಚಿತ್ರಣ, ವಿವಿಧ ತಜ್ಞರ ಸಮಾಲೋಚನೆ, ಪೋಷಕರಿಗೆ ಸಮಾಲೋಚನೆ, ಅರಿವಳಿಕೆ ಸಿದ್ಧತೆ ಹಾಗೂ ಶಸ್ತ್ರಚಿಕಿತ್ಸೆಯ ಪೂರ್ವಾಭ್ಯಾಸ ನಡೆಸಲಾಗಿತ್ತು.

ಪ್ರಸೂತಿ ಮತ್ತು ಸ್ತ್ರೀರೋಗ, ತಾಯಿ-ಭ್ರೂಣ ವೈದ್ಯಕೀಯ, ನರಶಸ್ತ್ರಚಿಕಿತ್ಸೆ, ಅರಿವಳಿಕೆ, ಪ್ಲಾಸ್ಟಿಕ್ ಶಸ್ತ್ರಚಿಕಿತ್ಸೆ, ವಿಕಿರಣಶಾಸ್ತ್ರ ಹಾಗೂ ನವಜಾತ ಶಿಶು ಚಿಕಿತ್ಸಾ ವಿಭಾಗಗಳ 30ಕ್ಕೂ ಹೆಚ್ಚು ವೈದ್ಯರು ಮತ್ತು ದಾದಿಯರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನರಶಸ್ತ್ರಚಿಕಿತ್ಸಾ ತಂಡಕ್ಕೆ ಪ್ರೊ. ದೀಪಕ್ ಗುಪ್ತಾ ನೇತೃತ್ವ ವಹಿಸಿದ್ದರು. ತಾಯಿ ಮತ್ತು ಭ್ರೂಣದ ವೈದ್ಯಕೀಯ ಹಾಗೂ ಪ್ರಸೂತಿ ಸಂಬಂಧಿತ ಜವಾಬ್ದಾರಿಯನ್ನು ಪ್ರೊ. ನೀನಾ ಮಲ್ಹೋತ್ರಾ ಮತ್ತು ಪ್ರೊ. ಕೆ. ಅಪರ್ಣಾ ಶರ್ಮಾ ನಿರ್ವಹಿಸಿದ್ದರು. ಅತ್ಯಾಧುನಿಕ ಸೂಕ್ಷ್ಮದರ್ಶಕ ಉಪಕರಣಗಳು ಹಾಗೂ ನಿರಂತರ ಅಲ್ಟ್ರಾಸೌಂಡ್ ಪರೀಕ್ಷೆಯ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಏನಿದು ಮೈಲೊಮೆನಿಂಗೊಸೀಲ್?

ಮೈಲೊಮೆನಿಂಗೊಸೀಲ್ ಎಂಬುದು ಸ್ಪೈನಾ ಬಿಫಿಡಾ ಕಾಯಿಲೆಯ ಅತ್ಯಂತ ಗಂಭೀರ ರೂಪವಾಗಿದೆ. ಈ ಸಮಸ್ಯೆಯಲ್ಲಿ ಬೆನ್ನುಹುರಿ ಮತ್ತು ಅದನ್ನು ಆವರಿಸಿರುವ ಪೊರೆಗಳು ಬೆನ್ನುಮೂಳೆಯಲ್ಲಿರುವ ತೆರೆದ ದೋಷದ ಮೂಲಕ ಹೊರಬರುತ್ತವೆ. ಇದರಿಂದ ಮಗುವಿಗೆ ಪಾರ್ಶ್ವವಾಯು, ಮೆದುಳಿನಲ್ಲಿ ನೀರು ತುಂಬುವ ಸಮಸ್ಯೆ ಹಾಗೂ ಜೀವನಪರ್ಯಂತ ನರಮಂಡಲಕ್ಕೆ ಸಂಬಂಧಿಸಿದ ತೊಂದರೆಗಳು ಉಂಟಾಗುವ ಸಾಧ್ಯತೆಯಿದೆ.

2024ರಲ್ಲಿ ಪ್ರಕಟವಾದ ಭಾರತದ 27 ಅಧ್ಯಯನಗಳ ಸಮೀಕ್ಷೆಯ ಪ್ರಕಾರ, ಪ್ರತಿ ಸಾವಿರ ಜನನಗಳಲ್ಲಿ ಸರಾಸರಿ 9.46 ಮಕ್ಕಳಲ್ಲಿ ನರನಾಳದ ಜನ್ಮಜಾತ ದೋಷಗಳು ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ರೋಗದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ಸಮೀಕ್ಷೆ ತಿಳಿಸಿದೆ.

ಭಾರತೀಯ ಮಕ್ಕಳ ನರಶಸ್ತ್ರಚಿಕಿತ್ಸಾ ಸಂಘದ ಅಧ್ಯಕ್ಷರೂ ಆಗಿರುವ ಪ್ರೊ. ದೀಪಕ್ ಗುಪ್ತಾ ಮಾತನಾಡಿ, ಭ್ರೂಣ ವೈದ್ಯಕೀಯ ಮತ್ತು ಮಕ್ಕಳ ನರಶಸ್ತ್ರಚಿಕಿತ್ಸೆ ಕ್ಷೇತ್ರದಲ್ಲಿ ಭಾರತ ಹೊಸ ಸಾಮರ್ಥ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.

ಸೂಕ್ತವಾಗಿ ಆಯ್ಕೆ ಮಾಡಿದ ಪ್ರಕರಣಗಳಲ್ಲಿ ಜನನಕ್ಕೂ ಮುನ್ನ ಶಸ್ತ್ರಚಿಕಿತ್ಸೆ ನಡೆಸುವುದರಿಂದ ತೆರೆದ ನರ ಅಂಗಾಂಶಗಳಿಗೆ ಮತ್ತಷ್ಟು ಹಾನಿಯಾಗುವುದನ್ನು ತಡೆಯಬಹುದು. ಮೆದುಳಿನಲ್ಲಿ ನೀರು ತುಂಬುವ ಸಮಸ್ಯೆಗೆ ಮುಂದೆ ಶಸ್ತ್ರಚಿಕಿತ್ಸೆಯ ಮೂಲಕ ಕೊಳವೆ ಅಳವಡಿಸುವ ಅಗತ್ಯವನ್ನು ಕಡಿಮೆ ಮಾಡಬಹುದು. ಕೆಲವು ನರಮಂಡಲ ಸಂಬಂಧಿತ ಸಮಸ್ಯೆಗಳಲ್ಲಿಯೂ ಸುಧಾರಣೆ ಸಾಧ್ಯವಾಗಬಹುದು. ಆದರೆ, ಇದು ಸಂಪೂರ್ಣ ಗುಣಪಡಿಸುವ ಚಿಕಿತ್ಸೆಯಲ್ಲ. ಮಗುವಿಗೆ ದೀರ್ಘಕಾಲ ವಿವಿಧ ವೈದ್ಯಕೀಯ ತಜ್ಞರ ಮೇಲ್ವಿಚಾರಣೆ ಅಗತ್ಯವಾಗಿರುತ್ತದೆ ಎಂದು ವಿವರಿಸಿದರು.

ಪ್ರೊ. ನೀನಾ ಮಲ್ಹೋತ್ರಾ ಅವರು ಈ ಸಾಧನೆಯು ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರ ಸಾಮೂಹಿಕ ಪ್ರಯತ್ನದ ಫಲವಾಗಿದೆ ಎಂದರು. ಪ್ರೊ. ಅಪರ್ಣಾ ಶರ್ಮಾ ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯದ ದೃಷ್ಟಿಯಿಂದ ಸಮಗ್ರ ಯೋಜನೆ ರೂಪಿಸಿದ ಬಳಿಕವೇ ಇಂತಹ ಶಸ್ತ್ರಚಿಕಿತ್ಸೆಯ ನಿರ್ಧಾರ ಕೈಗೊಳ್ಳಲಾಗುತ್ತದೆ. ಶಸ್ತ್ರಚಿಕಿತ್ಸೆಗೂ ಮುನ್ನ ಸಮಾಲೋಚನೆ, ಸೂಕ್ತ ಅರಿವಳಿಕೆ ವ್ಯವಸ್ಥೆ ಹಾಗೂ ಶಸ್ತ್ರಚಿಕಿತ್ಸೆಗೂ ಮುನ್ನ ಮತ್ತು ನಂತರ ನಿರಂತರ ಮೇಲ್ವಿಚಾರಣೆ ಅತ್ಯಗತ್ಯ ಎಂದು ತಿಳಿಸಿದರು.

ಅಂತರರಾಷ್ಟ್ರೀಯ ಅಧ್ಯಯನದಲ್ಲೂ ಸಾಬೀತಾದ ಪ್ರಯೋಜನ

ಮೈಲೊಮೆನಿಂಗೊಸೀಲ್ ಸಮಸ್ಯೆಗೆ ಜನನಕ್ಕೂ ಮುನ್ನ ಶಸ್ತ್ರಚಿಕಿತ್ಸೆ ನಡೆಸುವ ಕುರಿತು ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಅಧ್ಯಯನಗಳು ನಡೆದಿವೆ. ಈ ಪೈಕಿ ಮ್ಯಾನೇಜ್‌ಮೆಂಟ್ ಆಫ್ ಮೈಲೊಮೆನಿಂಗೊಸೀಲ್ ಅಧ್ಯಯನದ ಪ್ರಕಾರ, ಜನನಕ್ಕೂ ಮುನ್ನ ಶಸ್ತ್ರಚಿಕಿತ್ಸೆಗೊಳಗಾದ ಮಕ್ಕಳಲ್ಲಿ 12 ತಿಂಗಳ ವಯಸ್ಸಿನವರೆಗೆ ಮೆದುಳು ಮತ್ತು ಬೆನ್ನುಹುರಿಯ ದ್ರವ ಹೊರಹಾಕಲು ಕೊಳವೆ ಅಳವಡಿಸುವ ಅಗತ್ಯ ಶೇ.40ರಷ್ಟಿತ್ತು. ಜನನದ ಬಳಿಕ ಶಸ್ತ್ರಚಿಕಿತ್ಸೆಗೊಳಗಾದ ಮಕ್ಕಳಲ್ಲಿ ಈ ಪ್ರಮಾಣ ಶೇ.82ರಷ್ಟಿತ್ತು.

ಅಲ್ಲದೆ, ಮಕ್ಕಳ ಚಲನ ಸಾಮರ್ಥ್ಯದಲ್ಲಿ ಸುಧಾರಣೆ ಹಾಗೂ ಮೆದುಳಿನ ಹಿಂಭಾಗ ಕೆಳಕ್ಕೆ ಜಾರುವ ಚಿಯಾರಿ-2 ಸಮಸ್ಯೆಯ ಪ್ರಮಾಣದಲ್ಲಿಯೂ ಇಳಿಕೆ ಕಂಡುಬಂದಿತ್ತು. ಆದರೆ, ಈ ಶಸ್ತ್ರಚಿಕಿತ್ಸೆಯಿಂದ ಅವಧಿಪೂರ್ವ ಹೆರಿಗೆ ಹಾಗೂ ಗರ್ಭಾಶಯದಲ್ಲಿ ಗಾಯದ ಗುರುತು ಉಂಟಾಗುವ ಅಪಾಯವೂ ಇದೆ. ಹೀಗಾಗಿ ವಿಶೇಷ ವೈದ್ಯಕೀಯ ಸೌಲಭ್ಯ ಹೊಂದಿರುವ ಕೇಂದ್ರಗಳಲ್ಲಿ ಸೂಕ್ತ ಪ್ರಕರಣಗಳಿಗೆ ಮಾತ್ರ ಈ ಚಿಕಿತ್ಸೆ ನೀಡಲಾಗುತ್ತದೆ.

ಕುಟುಂಬಕ್ಕೆ ಉಚಿತ ಚಿಕಿತ್ಸೆ

ಕೇಂದ್ರ ಸರ್ಕಾರದ ಜನನಿ ಶಿಶು ಸುರಕ್ಷಾ ಕಾರ್ಯಕ್ರಮದಡಿ ಏಮ್ಸ್ ಈ ಶಸ್ತ್ರಚಿಕಿತ್ಸೆಯನ್ನು ಕುಟುಂಬಕ್ಕೆ ಉಚಿತವಾಗಿ ಒದಗಿಸಿದೆ. ಅಮೆರಿಕದಲ್ಲಿ ಭ್ರೂಣದ ಶಸ್ತ್ರಚಿಕಿತ್ಸೆ, ಹೆಚ್ಚಿನ ಅಪಾಯದ ಪ್ರಸೂತಿ ಆರೈಕೆ, ಹೆರಿಗೆ ಮತ್ತು ನವಜಾತ ಶಿಶುವಿನ ಚಿಕಿತ್ಸೆಯನ್ನು ಒಳಗೊಂಡ ಇಂತಹ ಸಮಗ್ರ ವೈದ್ಯಕೀಯ ಸೇವೆಗೆ ಆಸ್ಪತ್ರೆ ಹಾಗೂ ರೋಗಿಯ ಸ್ಥಿತಿಗನುಗುಣವಾಗಿ ಒಂದು ಕೋಟಿಗೂ ಅಧಿಕ ರೂಪಾಯಿ ವೆಚ್ಚವಾಗಬಹುದು ಎಂದು ಏಮ್ಸ್ ತಿಳಿಸಿದೆ.

ಭ್ರೂಣದ ಶಸ್ತ್ರಚಿಕಿತ್ಸೆಯು ಆಯ್ದ ಗರ್ಭಿಣಿಯರಿಗೆ ಚಿಕಿತ್ಸೆಯ ಆಯ್ಕೆಯೇ ಹೊರತು ಕಾಯಿಲೆ ತಡೆಗಟ್ಟುವ ವಿಧಾನವಲ್ಲ ಎಂದು ವೈದ್ಯಕೀಯ ತಂಡ ಸ್ಪಷ್ಟಪಡಿಸಿದೆ. ಗರ್ಭಧಾರಣೆಯ ಸುಮಾರು 28 ದಿನಗಳೊಳಗೆ ನರನಾಳ ಮುಚ್ಚುವ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಆದರೆ, ಅಷ್ಟರೊಳಗೆ ಅನೇಕ ಮಹಿಳೆಯರಿಗೆ ತಾವು ಗರ್ಭಿಣಿಯಾಗಿರುವುದೇ ತಿಳಿದಿರುವುದಿಲ್ಲ.

ಆದ್ದರಿಂದ ಗರ್ಭಧಾರಣೆಗೆ ಮುನ್ನವೇ ಫೋಲಿಕ್ ಆಮ್ಲ ಸೇವನೆಗೆ ಸಲಹೆ ನೀಡುವುದು, ಆಹಾರ ಪದಾರ್ಥಗಳಲ್ಲಿ ವೈಜ್ಞಾನಿಕವಾಗಿ ಫೋಲೇಟ್ ಅಂಶ ಸೇರಿಸುವುದು ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ರೋಗದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಬಲಪಡಿಸುವುದು ಅತ್ಯಗತ್ಯವಾಗಿದೆ.

ಶಸ್ತ್ರಚಿಕಿತ್ಸೆಯ ಬಳಿಕ ತಾಯಿ ಮತ್ತು ಭ್ರೂಣದ ಆರೋಗ್ಯದ ಮೇಲೆ ಗರ್ಭಾವಸ್ಥೆಯ ಉಳಿದ ಅವಧಿ, ಹೆರಿಗೆ ಹಾಗೂ ಮಗು ಜನಿಸಿದ ನಂತರವೂ ವಿವಿಧ ವೈದ್ಯಕೀಯ ವಿಭಾಗಗಳ ತಜ್ಞರ ತಂಡ ನಿರಂತರ ನಿಗಾ ವಹಿಸಲಿದೆ ಎಂದು ಏಮ್ಸ್ ತಿಳಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande