
ಗದಗ, 31 ಅಕ್ಟೋಬರ್ (ಹಿ.ಸ.):
ಸಾರಿಗೆ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಟ್ರಾಲಿ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ 15ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾಯಗೊಂಡಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಕನಕಾಪುರ ದ್ಯಾಮವ್ವನ ಗುಡಿ ಬಳಿ ನಡೆದಿದೆ.
ಶಿಗ್ಲಿ ರಸ್ತೆಯ ಬಳಿ ಹತ್ತಿ ಬಿಡಿಸುವ ಕೆಲಸಕ್ಕೆ ತೆರಳಿ ವಾಪಸ್ ಬರುತ್ತಿದ್ದ ಪ್ಯಾಟಿಕೇರಿ ಕೇರಿ ಬಡಾವಣೆಯ ಮಹಿಳಾ ಕಾರ್ಮಿಕರು ಅಪಘಾತಕ್ಕೀಡಾಗಿದ್ದಾರೆ. ಮಹಿಳಾ ಕಾರ್ಮಿಕರನ್ನು ಟ್ರ್ಯಾಕ್ಟರ್ ಟ್ರಾಲಿಯಲ್ಲಿ ಕರೆತರಲಾಗುತ್ತಿತ್ತು.
ಈ ವೇಳೆ ಶಿಗ್ಲಿಯಿಂದ ಬರುತ್ತಿದ್ದ ಸಾರಿಗೆ ಬಸ್ ಅನ್ನು ಹಿಂದಿಕ್ಕಿ ಟ್ರ್ಯಾಕ್ಟರ್ ಮುಂದೆ ಸಾಗುತ್ತಿತ್ತು. ಆಗ ಹಿಂಬದಿಯಿಂದ ಬಂದ ಸಾರಿಗೆ ಬಸ್ ಟ್ರ್ಯಾಕ್ಟರ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಬಸ್ ಡಿಕ್ಕಿಯ ರಭಸಕ್ಕೆ ಟ್ರ್ಯಾಕ್ಟರ್ ಟ್ರಾಲಿ ರಸ್ತೆ ಪಕ್ಕಕ್ಕೆ ಉರುಳಿದೆ. ಟ್ರಾಲಿಯಲ್ಲಿದ್ದ 15ಕ್ಕೂ ಹೆಚ್ಚು ಮಹಿಳಾ ಕಾರ್ಮಿಕರು ಗಾಯಗೊಂಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಲಕ್ಷ್ಮೇಶ್ವರ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ತಾಲೂಕು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ.
ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಘಾತದ ಕುರಿತು ಲಕ್ಷ್ಮೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R