ಬೀದಿ ನಾಯಿಗಳ ದಾಳಿಗೆ ನಾಲ್ಕು ವರ್ಷದ ಬಾಲಕ ಬಲಿ
ಕಲಬುರಗಿ ನಗರದ ಕೋಟನೂರ ಬಡಾವಣೆಯಲ್ಲಿ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
four-year-old-boy-dies-after-stray-dog-attack-in-kalaburagi


ಕಲಬುರಗಿ, 31 ಅಕ್ಟೋಬರ್ (ಹಿ.ಸ.):

ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಯೊಂದು ದಾಳಿ ನಡೆಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ದಾರುಣ ಘಟನೆ ಕಲಬುರಗಿ ನಗರದ ದರಿಯಾಪುರ ಕೋಟನೂರ ಬಡಾವಣೆಯಲ್ಲಿ ನಡೆದಿದೆ.

ಕಲಬುರಗಿ ತಾಲೂಕಿನ ಜಂಬಗಾ ಗ್ರಾಮದ ಶರಣಬಸಪ್ಪ ಪೂಜಾರಿ ಅವರ ಪುತ್ರ ಮನೋಜ್ ಪೂಜಾರಿ ಜಂಬಗಾ (4) ಮೃತಪಟ್ಟ ಬಾಲಕ. ಶರಣಬಸಪ್ಪ ಅವರು ಕಲಬುರಗಿಯಲ್ಲಿ ವಾಚ್ಮನ್ ಆಗಿ ಕೆಲಸ ಮಾಡುತ್ತಿದ್ದು, ಕುಟುಂಬದೊಂದಿಗೆ ವಾಸವಾಗಿದ್ದರು ಎಂದು ತಿಳಿದುಬಂದಿದೆ.

ಕೋಟನೂರ ಬಡಾವಣೆಯ ಗಾಣದೇವತೆ ದೇವಸ್ಥಾನದ ರಸ್ತೆಯಲ್ಲಿ ಮನೋಜ್ ಆಟವಾಡುತ್ತಿದ್ದ ವೇಳೆ ಬೀದಿ ನಾಯಿಯೊಂದು ಏಕಾಏಕಿ ದಾಳಿ ನಡೆಸಿದೆ.

ನಾಯಿ ದಾಳಿಯಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮನೋಜ್ ಮೃತಪಟ್ಟಿದ್ದಾನೆ.

ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಡಾವಣೆಯಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬಂದಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande