
ಬೆಂಗಳೂರು, 31 ಅಕ್ಟೋಬರ್ (ಹಿ.ಸ.):
ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಸೋಣೇಹಳ್ಳಿ ಸರ್ಕಲ್ ಸಮೀಪ ಬಾಂಬ್ ಮಾದರಿಯ ವಸ್ತುವೊಂದನ್ನು ಇಟ್ಟು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಧಾವಿಸಿದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದಾಗ, ಪತ್ತೆಯಾಗಿರುವ ವಸ್ತು ನೈಜ ಬಾಂಬ್ ಅಲ್ಲ ಎಂಬುದು ದೃಢಪಟ್ಟಿದೆ.
ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಬಾಂಬ್ ಮಾದರಿಯಲ್ಲಿ ಈ ವಸ್ತುವನ್ನು ತಯಾರಿಸಿ ನಿರ್ಜನ ಪ್ರದೇಶದಲ್ಲಿ ಇಟ್ಟು ಹೋಗಿರುವ ಶಂಕೆ ವ್ಯಕ್ತವಾಗಿದೆ.
ವಸ್ತುವನ್ನು ಸಂಪೂರ್ಣವಾಗಿ ತೆರೆದು ಪರಿಶೀಲಿಸಿದಾಗ ಅದರೊಳಗೆ ಯಾವುದೇ ಸ್ಫೋಟಕ ಅಥವಾ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲ. ಸಣ್ಣ ಪೈಪ್ಗಳು, ವೈರ್ಗಳು ಹಾಗೂ ಟೇಪ್ಗಳನ್ನು ಬಳಸಿ ಬಾಂಬ್ನಂತೆ ಕಾಣುವ ರೀತಿಯಲ್ಲಿ ಅದನ್ನು ಸಿದ್ಧಪಡಿಸಿರುವುದು ಪ್ರಾಥಮಿಕ ಪರಿಶೀಲನೆಯಲ್ಲಿ ತಿಳಿದುಬಂದಿದೆ ಎಂದು ಪೋಲಿಸ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಸಾರ್ವಜನಿಕರಲ್ಲಿ ಭಯ ಹಾಗೂ ಆತಂಕ ಸೃಷ್ಟಿಸುವ ಉದ್ದೇಶದಿಂದ ಕಿಡಿಗೇಡಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಕಲಿ ಬಾಂಬ್ ಇಟ್ಟು ಹೋದವರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಕೈಗೊಂಡಿದ್ದಾರೆ.
ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ವಸ್ತುವನ್ನು ಯಾರು ಮತ್ತು ಯಾವ ಸಮಯದಲ್ಲಿ ಇಟ್ಟು ಹೋಗಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ.
ಸದ್ಯ ಒಂದೇ ಸ್ಥಳದಲ್ಲಿ ಇಂತಹ ನಕಲಿ ಬಾಂಬ್ ಪತ್ತೆಯಾಗಿರುವ ಮಾಹಿತಿ ಲಭ್ಯವಾಗಿದ್ದು, ನಗರದ ಬೇರೆಡೆಗಳಲ್ಲಿಯೂ ಇದೇ ಮಾದರಿಯ ವಸ್ತುಗಳನ್ನು ಎಸೆಯಲಾಗಿದೆಯೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R