ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ ದೀರ್ಘಕಾಲೀನ ಯೋಜನೆ ರೂಪಿಸಲು ಸೂಚನೆ
ಬೆಂಗಳೂರು, 31 ಅಕ್ಟೋಬರ್ (ಹಿ.ಸ.): ಬೆಂಗಳೂರು ನಗರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮಾಸ್ಟರ್ ಪ್ಲಾನ್ ವ್ಯಾಪ್ತಿಯನ್ನೂ ಮೀರಿ ವೇಗವಾಗಿ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ, ಇಡೀ ಬೆಂಗಳೂರು ನಗರ ಜಿಲ್ಲೆಗೆ ಕುಡಿಯುವ ನೀರು, ರಸ್ತೆ ಸಂಪರ್ಕ ಹಾಗೂ ಭೂಗತ ಒಳಚರಂಡಿ ವ್ಯವಸ್ಥೆ ಕಲ್ಪಿಸಲ
bengaluru-master-plan-expansion-drinking-water-infrastructure-krishna-byre-gowda


ಬೆಂಗಳೂರು, 31 ಅಕ್ಟೋಬರ್ (ಹಿ.ಸ.):

ಬೆಂಗಳೂರು ನಗರವು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮಾಸ್ಟರ್ ಪ್ಲಾನ್ ವ್ಯಾಪ್ತಿಯನ್ನೂ ಮೀರಿ ವೇಗವಾಗಿ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ, ಇಡೀ ಬೆಂಗಳೂರು ನಗರ ಜಿಲ್ಲೆಗೆ ಕುಡಿಯುವ ನೀರು, ರಸ್ತೆ ಸಂಪರ್ಕ ಹಾಗೂ ಭೂಗತ ಒಳಚರಂಡಿ ವ್ಯವಸ್ಥೆ ಕಲ್ಪಿಸಲು ದೀರ್ಘಕಾಲೀನ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಿಕಾಸಸೌಧದಲ್ಲಿ ಶುಕ್ರವಾರ ನಡೆದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ನಾಲ್ಕನೇ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಂಗಳೂರಿನ ಬೆಳವಣಿಗೆ ನಿರೀಕ್ಷೆಗೂ ಮೀರಿ ವೇಗವಾಗಿ ಸಾಗುತ್ತಿದೆ.

ಹೀಗಾಗಿ ಜಿಬಿಎ ವ್ಯಾಪ್ತಿಯನ್ನು ಮಾತ್ರವಲ್ಲದೆ, ಅದರ ಹೊರಗಿನ ಪ್ರದೇಶಗಳ ಬೆಳವಣಿಗೆಯನ್ನೂ ಪರಿಗಣಿಸಿ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ ಯೋಜನೆ ರೂಪಿಸಬೇಕು ಎಂದು ತಿಳಿಸಿದರು.

ನಗರದ ಎಲ್ಲ ಭಾಗಗಳಿಗೂ ಸಮರ್ಪಕ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯಗಳ ಮೌಲ್ಯಮಾಪನ ನಡೆಸಬೇಕು. ಅದರ ಆಧಾರದ ಮೇಲೆ ನಿಗದಿತ ಕಾಲಮಿತಿಯೊಂದಿಗೆ ಹಂತ ಹಂತವಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು.

ಜಿಬಿಎ ವ್ಯಾಪ್ತಿಯಿಂದ ಹೊರಗಿರುವ ಪ್ರದೇಶಗಳಲ್ಲಿಯೂ ಹಳೆಯ ರಸ್ತೆಗಳನ್ನು ಅಭಿವೃದ್ಧಿಪಡಿಸುವುದರ ಜತೆಗೆ ಹೊಸ ರಸ್ತೆಗಳನ್ನು ನಿರ್ಮಿಸಬೇಕು ಎಂದು ನಿರ್ದೇಶಿಸಿದರು.

ಸಂಸ್ಕರಿಸಿದ ನೀರಿನ ಮರುಬಳಕೆಗೆ ಆದ್ಯತೆ

ಬೆಂಗಳೂರು ನಗರದಲ್ಲಿ ಉತ್ಪತ್ತಿಯಾಗುವ ಕೊಳಚೆ ನೀರನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಮರುಬಳಕೆ ಮಾಡುವುದಕ್ಕೆ ಸರ್ಕಾರ ಆದ್ಯತೆ ನೀಡುತ್ತಿದೆ ಎಂದು ಸಚಿವರು ಹೇಳಿದರು.

ಕೋರಮಂಗಲ-ಚಲ್ಲಘಟ್ಟ, ಹೆಬ್ಬಾಳ-ನಾಗವಾರ ಹಾಗೂ ವೃಷಭಾವತಿ ಕಣಿವೆ ಯೋಜನೆಗಳು ಜಲಮೂಲಗಳ ಪುನಶ್ಚೇತನ ಮತ್ತು ಅಂತರ್ಜಲ ಮಟ್ಟ ಸುಧಾರಣೆಗೆ ನೆರವಾಗಿವೆ. ಸಂಸ್ಕರಿಸಿದ ತ್ಯಾಜ್ಯನೀರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ನಗರದ ನೀರಿನ ಭದ್ರತೆಯನ್ನು ಬಲಪಡಿಸಬಹುದು. ಈ ನಿಟ್ಟಿನಲ್ಲಿ ಮತ್ತಷ್ಟು ದೀರ್ಘಕಾಲೀನ ಯೋಜನೆಗಳನ್ನು ರೂಪಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು ಎಂದು ತಿಳಿಸಿದರು.

ರಸ್ತೆ ಅಗೆದ ಸಂಸ್ಥೆಯೇ ಮರುಸ್ಥಾಪಿಸಬೇಕು

ನಗರದಲ್ಲಿ ಹದಗೆಡುತ್ತಿರುವ ಸಂಚಾರ ವ್ಯವಸ್ಥೆ ಹಾಗೂ ವಿವಿಧ ಕಾಮಗಾರಿಗಳಿಗಾಗಿ ಪದೇಪದೇ ರಸ್ತೆಗಳನ್ನು ಅಗೆಯುತ್ತಿರುವುದರಿಂದ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆಯೂ ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

ಇತರ ಸರ್ಕಾರಿ ಸಂಸ್ಥೆಗಳು ರಸ್ತೆಗಳನ್ನು ಅಗೆದರೂ, ಅದರಿಂದ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲಕ್ಕೆ ನಗರಪಾಲಿಕೆಗಳೇ ಹೊಣೆಗಾರರಾಗಬೇಕಾದ ಪರಿಸ್ಥಿತಿ ಇದೆ.

ಇನ್ನು ಮುಂದೆ ರಸ್ತೆ ಅಗೆಯುವ ಸಂಸ್ಥೆಯೇ ಅದನ್ನು ಮೊದಲಿನ ಸ್ಥಿತಿಗೆ ತರುವ ಸಂಪೂರ್ಣ ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

ರಸ್ತೆಗಳನ್ನು ಪದೇಪದೇ ಅಗೆದು ಹಾಳು ಮಾಡುವುದನ್ನು ತಡೆಯಲು ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳಿಗೂ ಅನ್ವಯವಾಗುವ ಏಕರೂಪದ ನೀತಿ ಹಾಗೂ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ಒಪಿ) ಜಾರಿಗೆ ತರಲಾಗುವುದು ಎಂದು ತಿಳಿಸಿದರು.

ಮೆಟ್ರೋ ನಿಲ್ದಾಣಗಳಿಗೆ ಜಿಪಿಎಸ್ ಆಧಾರಿತ ಫೀಡರ್ ಬಸ್

ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಿ ಖಾಸಗಿ ವಾಹನಗಳ ಬಳಕೆ ಕಡಿಮೆ ಮಾಡಲು ಮೆಟ್ರೋ ನಿಲ್ದಾಣಗಳಿಗೆ ಫೀಡರ್ ಬಸ್ ಸೇವೆ ವಿಸ್ತರಿಸುವಂತೆ ಸಚಿವರು ಸೂಚಿಸಿದರು.

ಮೆಟ್ರೋ ನಿಲ್ದಾಣಗಳ ಸುತ್ತಮುತ್ತ 2ರಿಂದ 3 ಕಿ.ಮೀ. ವ್ಯಾಪ್ತಿಯಲ್ಲಿ ಬಿಎಂಟಿಸಿ ವತಿಯಿಂದ ಜಿಪಿಎಸ್ ಆಧಾರಿತ ಫೀಡರ್ ಬಸ್ಗಳನ್ನು ಒದಗಿಸಬೇಕು.

ಅದರಲ್ಲೂ ಹೊರ ವರ್ತುಲ ರಸ್ತೆಯುದ್ದಕ್ಕೂ ಮೊದಲ ಮತ್ತು ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸುವುದರಿಂದ ಪ್ರಯಾಣಿಕರಿಗೆ ಮೆಟ್ರೋ ಸೇವೆ ಸುಲಭವಾಗಿ ಲಭ್ಯವಾಗಲಿದೆ ಎಂದರು.

ಇತ್ತೀಚೆಗೆ ಪರಿಚಯಿಸಲಾದ ಬಿಎಂಟಿಸಿ 2.0 ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರಯಾಣಿಕರು ಒಂದೇ ವೇದಿಕೆಯಲ್ಲಿ ಮೆಟ್ರೋ ಮತ್ತು ಬಿಎಂಟಿಸಿ ಬಸ್ಗಳ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.

ಮುಂದಿನ ದಿನಗಳಲ್ಲಿ ಖಾಸಗಿ ಆಟೋರಿಕ್ಷಾ ಹಾಗೂ ಟ್ಯಾಕ್ಸಿ ಸೇವೆಗಳನ್ನೂ ಈ ಅಪ್ಲಿಕೇಶನ್ನೊಂದಿಗೆ ಸಂಯೋಜಿಸುವ ಯೋಜನೆ ಇದೆ. ಇದರಿಂದ ಸಾರ್ವಜನಿಕರಿಗೆ ಸಮಗ್ರ ಹಾಗೂ ಸುಗಮ ಸಾರಿಗೆ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಲಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande