ದಾವಣಗೆರೆ: ನಲ್ಕುದುರೆ ಐತಿಹಾಸಿಕ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಆರಂಭ
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದ ಐತಿಹಾಸಿಕ ಕೆರೆ ಒತ್ತುವರಿಯನ್ನು 15 ವರ್ಷಗಳ ಹೋರಾಟದ ಬಳಿಕ ಜಿಲ್ಲಾಡಳಿತ ತೆರವುಗೊಳಿಸಿದ್ದು, ಸುಮಾರು 30 ಎಕರೆ ಜಮೀನನ್ನು ವಶಕ್ಕೆ ಪಡೆದಿದೆ.
Davangere Lake Encroachment


ದಾವಣಗೆರೆ, 31 ಅಕ್ಟೋಬರ್ (ಹಿ.ಸ.):

ರೈತರ ಹಾಗೂ ಗ್ರಾಮಸ್ಥರ ಸುದೀರ್ಘ ಹೋರಾಟಕ್ಕೆ ಕೊನೆಗೂ ಸ್ಪಂದಿಸಿರುವ ಜಿಲ್ಲಾಡಳಿತ, ಚನ್ನಗಿರಿ ತಾಲೂಕಿನ ನಲ್ಕುದುರೆ ಗ್ರಾಮದ ಐತಿಹಾಸಿಕ ಕೆರೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಿದೆ.

ಕೆರೆ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಹಾಗೂ ರೈತರು ಕಳೆದ ಒಂದೂವರೆ ದಶಕದಿಂದ ಹೋರಾಟ ನಡೆಸುತ್ತಿದ್ದರು. ಈ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾದ ಬೆನ್ನಲ್ಲೇ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದ್ದು, ನೀರಾವರಿ, ಕಂದಾಯ ಹಾಗೂ ಸರ್ವೆ ಇಲಾಖೆಗಳ ಅಧಿಕಾರಿಗಳು ಜಂಟಿಯಾಗಿ ತೆರವು ಕಾರ್ಯಾಚರಣೆ ಕೈಗೊಂಡಿದ್ದಾರೆ.

ಕಾರ್ಯಾಚರಣೆಯ ವೇಳೆ ಕೆರೆಯ ಸುಮಾರು 30 ಎಕರೆ ಒತ್ತುವರಿ ಜಮೀನನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಕೆರೆಯ ಗಡಿಭಾಗದಲ್ಲಿ ಜೆಸಿಬಿ ಯಂತ್ರದ ಮೂಲಕ ಕಂದಕ (ಟ್ರೆಂಚ್) ನಿರ್ಮಿಸಿ ಗಡಿರೇಖೆಯನ್ನು ಗುರುತಿಸುವ ಕಾರ್ಯವೂ ನಡೆದಿದೆ.

ನಲ್ಕುದುರೆ ಗ್ರಾಮದ ಸರ್ವೆ ನಂಬರ್ 56ರಲ್ಲಿ ಒಟ್ಟು 62.27 ಎಕರೆ ವಿಸ್ತೀರ್ಣದ ಐತಿಹಾಸಿಕ ಕೆರೆ ಇದೆ. 1977-78ರಲ್ಲಿಯೇ ಕೆರೆಗಾಗಿ ಭೂಸ್ವಾಧೀನ ಪ್ರಕ್ರಿಯೆ ನಡೆಸಿ ಸಂಬಂಧಪಟ್ಟವರಿಗೆ ಪರಿಹಾರವನ್ನೂ ನೀಡಲಾಗಿತ್ತು. ಆದರೂ ಕೆರೆಯ ಜಮೀನಿನ ಒತ್ತುವರಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಸಮಸ್ಯೆ ಮುಂದುವರಿದಿತ್ತು ಎನ್ನಲಾಗಿದೆ.

ಕೆರೆ ಒತ್ತುವರಿಯಿಂದಾಗಿ ಗ್ರಾಮದಲ್ಲಿ ಹಲವು ಸಮಸ್ಯೆಗಳು ಎದುರಾಗಿದ್ದವು. ಕೆರೆಯ ಮೂಲ ವಿಸ್ತೀರ್ಣವನ್ನು ಸಂರಕ್ಷಿಸಿ ಒತ್ತುವರಿ ತೆರವುಗೊಳಿಸುವಂತೆ ಗ್ರಾಮಸ್ಥರು ಹಲವು ವರ್ಷಗಳಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸುವುದರ ಜತೆಗೆ ಹೋರಾಟ ನಡೆಸುತ್ತಿದ್ದರು.

ಮಾಧ್ಯಮ ವರದಿಗಳ ಬಳಿಕ ಎಚ್ಚೆತ್ತ ಜಿಲ್ಲಾಡಳಿತ ಇದೀಗ ಕಾರ್ಯಾಚರಣೆ ಆರಂಭಿಸಿದ್ದು, ಕೆರೆಯ ಉಳಿದ ಒತ್ತುವರಿಯನ್ನೂ ಸಂಪೂರ್ಣವಾಗಿ ತೆರವುಗೊಳಿಸಿ ಐತಿಹಾಸಿಕ ಜಲಮೂಲವನ್ನು ಸಂರಕ್ಷಿಸಬೇಕು ಎಂಬುದು ಗ್ರಾಮಸ್ಥರು ಹಾಗೂ ರೈತರ ಒತ್ತಾಯವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande