
ಬೆಂಗಳೂರು, 31 ಅಕ್ಟೋಬರ್ (ಹಿ.ಸ.):
ಕನ್ನಡ ರಾಜ್ಯೋತ್ಸವದ ಸಂಭ್ರಮ ನಾಡಿನಾದ್ಯಂತ ಮನೆಮಾಡಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಕನ್ನಡಾಭಿಮಾನ ಮೆರೆದ ಅದ್ಧೂರಿ ಮೆರವಣಿಗೆ ನಡೆಯಿತು.
ನಗರದ ಮಲ್ಲೇಶ್ವರಂ ಮಾರಮ್ಮ ವೃತ್ತದಿಂದ ರಾಜಾಜಿನಗರದ ಓರಿಯನ್ ಮಾಲ್ವರೆಗೆ ಕನ್ನಡ ಸೇನೆ ಕರ್ನಾಟಕದ ವತಿಯಿಂದ ಭವ್ಯ ಕನ್ನಡ ರಾಜ್ಯೋತ್ಸವದ ರ್ಯಾಲಿ ಆಯೋಜಿಸಲಾಗಿತ್ತು.
ಕನ್ನಡ ಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಅವರ ನೇತೃತ್ವದಲ್ಲಿ ನಡೆದ ಮೆರವಣಿಗೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಭುವನೇಶ್ವರಿ ತಾಯಿಯ ಮೆರವಣಿಗೆ ಕನ್ನಡಿಗರ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.
ಕನ್ನಡ ಬಾವುಟಗಳನ್ನು ಹಿಡಿದು ಕನ್ನಡಪರ ಘೋಷಣೆಗಳನ್ನು ಕೂಗಿದ ಕನ್ನಡಾಭಿಮಾನಿಗಳು ರಾಜ್ಯೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದರು.
ವಿಶೇಷವಾಗಿ ವಿಶೇಷಚೇತನರು ಮೆರವಣಿಗೆಯಲ್ಲಿ ಪಾಲ್ಗೊಂಡು ಕನ್ನಡದ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದರು. ಬೈಕ್ ರೈಡರ್ಸ್ಗಳು ಕನ್ನಡದ ಬಾವುಟಗಳನ್ನು ಹಾರಿಸುವ ಮೂಲಕ ಕನ್ನಡದ ಕಹಳೆ ಮೊಳಗಿಸಿದರು.
ಮೆರವಣಿಗೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಶಾಸಕ ಗೋಪಾಲಯ್ಯ, ಶಾಸಕ ಅಶ್ವತ್ಥ ನಾರಾಯಣ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕನ್ನಡ ಸೇನೆ ಕರ್ನಾಟಕದ ರಾಜ್ಯಾಧ್ಯಕ್ಷ ಕೆ.ಆರ್. ಕುಮಾರ್ ಅವರು, ಕನ್ನಡ ಭಾಷೆ, ನಾಡು, ನುಡಿ ಮತ್ತು ಸಂಸ್ಕೃತಿಯ ಉಳಿವು ಹಾಗೂ ಬೆಳವಣಿಗೆಗೆ ಪ್ರತಿಯೊಬ್ಬ ಕನ್ನಡಿಗರೂ ಕೈಜೋಡಿಸಬೇಕು.
ಕನ್ನಡದ ಹಿರಿಮೆ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂಬ ಆಶಯ ವ್ಯಕ್ತಪಡಿಸಿದರು.
ಒಟ್ಟಾರೆ, ಕನ್ನಡದ ಬಾವುಟ, ಜಾನಪದ ಕಲಾ ಪ್ರದರ್ಶನ ಹಾಗೂ ಕನ್ನಡಪರ ಘೋಷಣೆಗಳೊಂದಿಗೆ ನಡೆದ ರ್ಯಾಲಿ ರಾಜಧಾನಿಯಲ್ಲಿ ಕನ್ನಡದ ಕಂಪು ಪಸರಿಸುವುದರ ಜತೆಗೆ ರಾಜ್ಯೋತ್ಸವದ ಸಂಭ್ರಮಕ್ಕೆ ಸಾಕ್ಷಿಯಾಯಿತು.
--------------
ಹಿಂದೂಸ್ತಾನ್ ಸಮಾಚಾರ್ / BHARGAVI G R