ಗ್ರಾಮೀಣ ಪ್ರತಿಭೆಗೆ ಸಚಿವ ಎಂ.ಬಿ. ಪಾಟೀಲರ ಪ್ರೋತ್ಸಾಹದ ಬಲ: ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಗುರಿಯೊಂದಿಗೆ ಬಿಲ್ಲುಗಾರ್ತಿ ದೇವಮ್ಮ
ವಿಜಯಪುರ, 19 ಅಕ್ಟೋಬರ್ (ಹಿ.ಸ.) ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಪುರ ಗ್ರಾಮದ ಯುವ ಬಿಲ್ಲುಗಾರ್ತಿ ದೇವಮ್ಮ
ಗ್ರಾಮೀಣ ಪ್ರತಿಭೆ


ವಿಜಯಪುರ, 19 ಅಕ್ಟೋಬರ್ (ಹಿ.ಸ.)

ಗ್ರಾಮೀಣ ಪ್ರದೇಶದ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ಅಗತ್ಯ ಸೌಲಭ್ಯಗಳನ್ನು ಒದಗಿಸಿದರೆ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದಕ್ಕೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವಿಪುರ ಗ್ರಾಮದ ಯುವ ಬಿಲ್ಲುಗಾರ್ತಿ ದೇವಮ್ಮ ಮಾನಪ್ಪ ಅವರ ಸಾಧನೆ ಸಾಕ್ಷಿಯಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಬಡ ಕುಟುಂಬದ ಹಿನ್ನೆಲೆಯಿಂದ ಬಂದಿರುವ ದೇವಮ್ಮ ಅವರು ಸೀಮಿತ ಆರ್ಥಿಕ ಸೌಲಭ್ಯಗಳ ನಡುವೆಯೂ ಬಿಲ್ಲುಗಾರಿಕೆ ಕ್ರೀಡೆಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅವರ ಪರಿಶ್ರಮ, ಆತ್ಮವಿಶ್ವಾಸ ಮತ್ತು ಕ್ರೀಡೆಯಲ್ಲಿನ ಬದ್ಧತೆ ಮೆಚ್ಚುವಂತಹದ್ದು ಎಂದು ಸಚಿವರು ಪ್ರಶಂಸಿಸಿದ್ದಾರೆ.

₹3.5 ಲಕ್ಷ ಮೌಲ್ಯದ ಕ್ರೀಡಾ ಕಿಟ್ ನೆರವು

ದೇವಮ್ಮ ಅವರಲ್ಲಿರುವ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಕಳೆದ ವರ್ಷ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ನಿಧಿಯಡಿ ₹3.5 ಲಕ್ಷ ಮೌಲ್ಯದ ಬಿಲ್ಲುಗಾರಿಕೆ ಕ್ರೀಡಾ ಕಿಟ್ ಒದಗಿಸಲಾಗಿತ್ತು. ಈ ನೆರವು ಅವರ ಕ್ರೀಡಾ ಅಭ್ಯಾಸಕ್ಕೆ ಉತ್ತೇಜನ ನೀಡಿದ್ದು, 2025ರ ದಸರಾ ಕ್ರೀಡಾಕೂಟದ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲಲು ಸಹಕಾರಿಯಾಯಿತು.

ಇದಲ್ಲದೆ, ದೇವಮ್ಮ ಅವರು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿಯೂ ಪದಕಗಳನ್ನು ಗಳಿಸಿ ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ಪದಕಗಳೊಂದಿಗೆ ತಮ್ಮನ್ನು ಭೇಟಿಯಾಗಿ ಸಾಧನೆಯ ಪಯಣವನ್ನು ಹಂಚಿಕೊಂಡಿದ್ದು, ಅವರ ಸಾಧನೆ ಮತ್ತು ಛಲವನ್ನು ಕಂಡು ಅಪಾರ ಸಂತೋಷವಾಗಿದೆ ಎಂದು ಎಂ.ಬಿ. ಪಾಟೀಲ ಹೇಳಿದ್ದಾರೆ.

ಆರ್ಥಿಕ ಸಂಕಷ್ಟದ ನಡುವೆಯೂ ಸಾಧನೆಯ ಹಾದಿ

ತಂದೆಯನ್ನು ಕಳೆದುಕೊಂಡಿರುವ ದೇವಮ್ಮ ಅವರು ಸೀಮಿತ ಆರ್ಥಿಕ ಸಂಪನ್ಮೂಲಗಳ ನಡುವೆಯೂ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಶ್ರಮಿಸುತ್ತಿದ್ದಾರೆ. ಇಂತಹ ಪ್ರತಿಭಾವಂತ ಕ್ರೀಡಾಪಟುಗಳ ಕನಸುಗಳಿಗೆ ಬೆಂಬಲವಾಗಿ ನಿಲ್ಲುವುದು ಸಮಾಜದ ಹಾಗೂ ಜನಪ್ರತಿನಿಧಿಗಳ ಜವಾಬ್ದಾರಿಯಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಲು ಪ್ರತಿಭೆಯ ಜೊತೆಗೆ ಗುಣಮಟ್ಟದ ತರಬೇತಿ, ಸೂಕ್ತ ಕ್ರೀಡಾ ಪರಿಕರಗಳು, ಪೌಷ್ಟಿಕ ಆಹಾರ ಮತ್ತು ನಿರಂತರ ಮಾರ್ಗದರ್ಶನ ಅತ್ಯಗತ್ಯ. ಈ ಹಿನ್ನೆಲೆಯಲ್ಲಿ ದೇವಮ್ಮ ಅವರಿಗೆ ಮುಂದಿನ ದಿನಗಳಲ್ಲಿ ಒಲಿಂಪಿಕ್ಸ್ ಮಟ್ಟದ ತರಬೇತಿ ಪಡೆಯಲು ಹಾಗೂ ಅಗತ್ಯ ಕ್ರೀಡಾ ಪರಿಕರಗಳನ್ನು ಒದಗಿಸಲು ಸಾಧ್ಯವಿರುವ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಒಲಿಂಪಿಕ್ಸ್ನಲ್ಲಿ ಭಾರತದ ಪರ ಪದಕ ಗೆಲ್ಲಲಿ

ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರಿಗೆ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಬಲ್ಲರು. ದೇವಮ್ಮ ಅವರ ಸಾಧನೆ ಇತರ ಯುವ ಕ್ರೀಡಾಪಟುಗಳಿಗೂ ಸ್ಫೂರ್ತಿಯಾಗಲಿದೆ. ಅವರ ಕ್ರೀಡಾ ಪಯಣಕ್ಕೆ ನಿರಂತರ ಬೆಂಬಲ ದೊರೆತು, ಮುಂದೊಂದು ದಿನ ಒಲಿಂಪಿಕ್ಸ್ನಲ್ಲಿ ಭಾರತದ ಪರ ಸ್ಪರ್ಧಿಸಿ ಪದಕ ಗೆಲ್ಲುವ ಮಟ್ಟಕ್ಕೆ ಬೆಳೆಯಲಿ ಎಂಬುದು ತಮ್ಮ ಹಾರೈಕೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಕಲ್ಪಿಸುವ ಮೂಲಕ ಕ್ರೀಡಾ ಕ್ಷೇತ್ರದಲ್ಲಿ ಹೊಸ ಸಾಧನೆಗಳಿಗೆ ದಾರಿ ಮಾಡಿಕೊಡಬಹುದು ಎಂಬ ಆಶಯದೊಂದಿಗೆ ದೇವಮ್ಮ ಅವರಂತಹ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಅಗತ್ಯವಿದೆ ಎಂಬ ಸಂದೇಶವನ್ನು ಸಚಿವರು ನೀಡಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande