ರಾಜ್ಯದಲ್ಲಿ ಬರದ ತೀವ್ರತೆ ಮುಂದುವರಿಕೆ: ಆಹಾರ ಉತ್ಪಾದನೆಯಲ್ಲಿ ಶೇ.82ರಷ್ಟು ನಷ್ಟ
ಬೆಂಗಳೂರು, 19 ಅಕ್ಟೋಬರ್ (ಹಿ.ಸ.): ರಾಜ್ಯದ ಬಹುತೇಕ ಭಾಗಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಆಹಾರ ಉತ್ಪಾದನೆಗೆ ಭಾರಿ ಹೊಡೆತ ಬಿದ್ದಿದೆ. ಜಾನುವಾರುಗಳಿಗೆ ಮೇವು ಲಭ್ಯತೆ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಬರಪೀಡಿತ ರೈತರು ಹಾಗೂ ಸಾರ್ವಜನಿಕರಿಗ
Karnataka-Drought-Crisis-82-Percent-Food-Production-Loss-Government-Seeks-Centre-Relief


ಬೆಂಗಳೂರು, 19 ಅಕ್ಟೋಬರ್ (ಹಿ.ಸ.):

ರಾಜ್ಯದ ಬಹುತೇಕ ಭಾಗಗಳಲ್ಲಿ ಬರ ಪರಿಸ್ಥಿತಿ ತೀವ್ರವಾಗಿದ್ದು, ಆಹಾರ ಉತ್ಪಾದನೆಗೆ ಭಾರಿ ಹೊಡೆತ ಬಿದ್ದಿದೆ. ಜಾನುವಾರುಗಳಿಗೆ ಮೇವು ಲಭ್ಯತೆ ಕುಸಿದಿದ್ದು, ಕುಡಿಯುವ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ.

ಬರಪೀಡಿತ ರೈತರು ಹಾಗೂ ಸಾರ್ವಜನಿಕರಿಗೆ ನೆರವು ಒದಗಿಸಲು ರಾಜ್ಯ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ಕೇಂದ್ರ ಸರ್ಕಾರದಿಂದ ಬರ ಪರಿಹಾರ ಅನುದಾನ ಪಡೆಯಲು ಪ್ರಯತ್ನ ಮುಂದುವರಿಸಿದೆ ಎಂದು ಉಪ‌ಮುಖ್ಯಮಂತ್ರಿ ಪರಮೇಶ್ವರ ತಿಳಿಸಿದ್ದಾರೆ.

ಸೋಮವಾರ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕದ ಹಲವು ಭಾಗಗಳು ಸೇರಿದಂತೆ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸ್ಥಳ ಪರಿಶೀಲನೆ ನಡೆಸಿ ರೈತರೊಂದಿಗೆ ನೇರವಾಗಿ ಚರ್ಚಿಸಿದ್ದೇನೆ.

ಇತ್ತೀಚೆಗೆ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದ್ದರೂ ರಾಜ್ಯದ ಬಹುತೇಕ ಭಾಗಗಳಲ್ಲಿ ಬರದ ತೀವ್ರತೆ ಕಡಿಮೆಯಾಗಿಲ್ಲ ಎಂದು ಹೇಳಿದರು.

ಆಹಾರ ಉತ್ಪಾದನೆಯಲ್ಲಿ ಶೇ.82ರಷ್ಟು ನಷ್ಟ

ಬರದಿಂದಾಗಿ ಆಹಾರ ಉತ್ಪಾದನೆಯಲ್ಲಿ ಅಂದಾಜು ಶೇ.82ರಷ್ಟು ನಷ್ಟ ಉಂಟಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಆಹಾರ ಧಾನ್ಯಗಳ ಲಭ್ಯತೆ ಕುರಿತು ಆತಂಕ ಎದುರಾಗಿದೆ. ಹಲವು ಪ್ರದೇಶಗಳಲ್ಲಿ ಟ್ಯಾಂಕರ್ಗಳ ಮೂಲಕ ಹಾಗೂ ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಕುಡಿಯುವ ನೀರು ಪೂರೈಸಲಾಗುತ್ತಿದೆ.

ಆದರೆ ನೀರಿನ ಮೂಲಗಳೇ ಬತ್ತಿಹೋದರೆ ಟ್ಯಾಂಕರ್ಗಳ ಮೂಲಕವೂ ನೀರು ಪೂರೈಸುವುದು ಕಷ್ಟವಾಗಬಹುದು. ಇದು ಗಂಭೀರ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ವಿವರಿಸಿದರು.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಬರಪೀಡಿತ ಪ್ರದೇಶಗಳು ಮತ್ತು ಬೆಳೆ ನಷ್ಟದ ಕುರಿತು ಸಮೀಕ್ಷೆ ನಡೆಸಲಾಗುತ್ತಿದೆ. ಈ ವರದಿಯ ಆಧಾರದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ (ಎನ್ಡಿಆರ್ಎಫ್) ನಿಯಮಗಳಡಿ ಪರಿಹಾರ ಕೋರಲಾಗುತ್ತಿದೆ.

ಮೂರನೇ ಹಂತದ ಬರ ಪರಿಹಾರ ಮನವಿ ಪತ್ರ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ಎರಡು ದಿನಗಳಲ್ಲಿ ಪೂರ್ಣಗೊಳಿಸಿ ಕೇಂದ್ರಕ್ಕೆ ಸಲ್ಲಿಸುವ ನಿರೀಕ್ಷೆಯಿದೆ ಎಂದರು.

ಸರ್ವಪಕ್ಷ ನಿಯೋಗದ ಕುರಿತು ಚರ್ಚೆ

ಬರ ಪರಿಹಾರ ಮನವಿ ಪತ್ರವನ್ನು ಮುಖ್ಯಮಂತ್ರಿ, ತಾವು ಅಥವಾ ನಿಯೋಗದ ಮೂಲಕ ಸಲ್ಲಿಸಬೇಕೇ ಎಂಬ ಬಗ್ಗೆ ಮುಖ್ಯಮಂತ್ರಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಈ ಹಿಂದೆ ಸರ್ವಪಕ್ಷ ನಿಯೋಗ ಕರೆದೊಯ್ಯುವ ಪ್ರಸ್ತಾಪವಿತ್ತು. ಆದರೆ ನಿಯೋಗದಲ್ಲಿ ಭಾಗವಹಿಸುವ ವಿಚಾರವಾಗಿ ಪ್ರತಿಪಕ್ಷಗಳಲ್ಲಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿರುವುದರಿಂದ, ಚರ್ಚೆಯ ಬಳಿಕ ಮುಂದಿನ ಕ್ರಮ ನಿರ್ಧರಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಬರ ಪರಿಹಾರದ ಅಗತ್ಯ ಅನುದಾನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಇದರಿಂದ ಸಂಕಷ್ಟದಲ್ಲಿರುವ ರೈತರು ಸೇರಿದಂತೆ ಬಾಧಿತರಿಗೆ ಹೆಚ್ಚಿನ ನೆರವು ಒದಗಿಸಲು ಸಾಧ್ಯವಾಗಲಿದೆ. ಆದರೆ ಕೇಂದ್ರದ ಅನುದಾನಕ್ಕಾಗಿ ರಾಜ್ಯ ಸರ್ಕಾರ ಕಾಯುತ್ತಿಲ್ಲ. ರಾಜ್ಯದ ಸ್ವಂತ ಸಂಪನ್ಮೂಲಗಳಿಂದಲೇ ಬರ ಪರಿಹಾರ ಮತ್ತು ಕುಡಿಯುವ ನೀರಿನ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲಾಮಟ್ಟದಲ್ಲಿ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ವಿಬಿ-ಜಿ ರಾಮ್ ಜಿ ಕಾಮಗಾರಿಗಳಿಗೆ ಅನುದಾನವಿಲ್ಲ

ವಿಬಿ-ಜಿ ರಾಮ್ ಜಿ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ಈವರೆಗೆ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಆದರೂ ರಾಜ್ಯ ಸರ್ಕಾರ ತನ್ನದೇ ಸಂಪನ್ಮೂಲಗಳಿಂದ ಕಾಮಗಾರಿಗಳಿಗೆ ಹಣ ಒದಗಿಸಿ ಮುಂದುವರಿಸುತ್ತಿದೆ ಎಂದು ಅವರು ಆರೋಪಿಸಿದರು.

ರೈತರಿಗೆ ಪರಿಹಾರವಾಗಿ ತಲಾ ₹2,500 ನೀಡಲು ರಾಜ್ಯ ಸರ್ಕಾರ ಸುಮಾರು ₹1,250 ಕೋಟಿ ವೆಚ್ಚ ಮಾಡುತ್ತಿದೆ. ಸರ್ಕಾರದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಇದ್ದರೂ, ಈ ಸಂಕಷ್ಟದ ಸಮಯದಲ್ಲಿ ರೈತರು ಮತ್ತು ಸಾರ್ವಜನಿಕರ ಬೆಂಬಲಕ್ಕೆ ನಿಲ್ಲುವುದು ಹಾಗೂ ಅಗತ್ಯ ನೆರವು ತಲುಪಿಸುವುದೇ ನಮ್ಮ ಆದ್ಯತೆಯಾಗಿದೆ ಎಂದು ಅವರು ಹೇಳಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande