
ಬಾಗಲಕೋಟೆ, 19 ಅಕ್ಟೋಬರ್ (ಹಿ.ಸ.):
ಹವೇಲಿ ಗ್ರಾಮದಲ್ಲಿ ಶ್ರೀ ಬನಶಂಕರಿದೇವಿಯ ಪುರಾಣ ಮಂಗಲ ಕಾರ್ಯಕ್ರಮದ ಅಂಗವಾಗಿ ನಡೆದ ಜಾತ್ರಾ ಮಹೋತ್ಸವದಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಯಾವುದೇ ಭೇದಭಾವವಿಲ್ಲದೆ ಒಗ್ಗಟ್ಟಿನಿಂದ ಪಾಲ್ಗೊಂಡು ಸಂಭ್ರಮಿಸಿದ್ದು, ಗ್ರಾಮದ ಭಾವೈಕ್ಯತೆಯ ಪರಂಪರೆಗೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಉಮೇಶ್ ಮೇಟಿ, ಹವೇಲಿ ಗ್ರಾಮದ ಜನರು ಧರ್ಮದ ಭೇದ ಮರೆತು ಪರಸ್ಪರ ಸಹೋದರತ್ವದೊಂದಿಗೆ ಜಾತ್ರೆಯನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ದೇವಿ ಆರಾಧನೆ ಹಾಗೂ ಜಾತ್ರಾ ಕಾರ್ಯಕ್ರಮಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಸೀಮಿತವಾಗದೆ, ಸಮಾಜದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆಯನ್ನು ಬೆಳೆಸುವ ವೇದಿಕೆಗಳಾಗಬೇಕು. ಹವೇಲಿ ಗ್ರಾಮದಲ್ಲಿ ಹಿಂದೂ–ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಜಾತ್ರೆಯಲ್ಲಿ ಭಾಗವಹಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಹವೇಲಿ ಗ್ರಾಮದ ಭಾವೈಕ್ಯತೆಯ ಪರಂಪರೆ ಮುಂದುವರಿಯಲಿ. ಈ ಸೌಹಾರ್ದತೆ ಇಡೀ ಸಮಾಜಕ್ಕೆ ಮಾದರಿಯಾಗಲಿ ಎಂದು ಶಾಸಕ ಉಮೇಶ್ ಮೇಟಿ ಆಶಿಸಿದರು.
ಗ್ರಾಮದ ಹಿರಿಯರು, ವಿವಿಧ ಸಮುದಾಯಗಳ ಮುಖಂಡರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಬನಶಂಕರಿದೇವಿಯ ಆಶೀರ್ವಾದ ಪಡೆದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande